May 29, 2026
Friday, May 29, 2026
spot_img

ಸ್ನಾನಕ್ಕೆಂದು ನದಿಗೆ ಇಳಿದ ಯುವಕ ನಾಪತ್ತೆ: ಅಗ್ನಿಶಾಮಕ ದಳ, ಸ್ಥಳೀಯರಿಂದ ಹುಡುಕಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ನಾನಕ್ಕೆಂದು ನದಿಗೆ ಇಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಸೋಮವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೋರಿಯಾರ್ ಪ್ರದೇಶದಲ್ಲಿ ನಡೆದಿದೆ.

ನಾಪತ್ತೆಯಾದ ಯುವಕನನ್ನು ಮಂಜು ಅವರ ಪುತ್ರ ರಕ್ಷಿತ್ (26) ಎಂದು ಗುರುತಿಸಲಾಗಿದೆ. ಮೂಲತಃ ಮರ್ದಾಳ ನಿವಾಸಿಯಾಗಿರುವ ರಕ್ಷಿತ್ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ಕೋರಿಯಾರ್ ಸಮೀಪದ ‘ಅರಬ್ಬಿ ತೋಡು’ ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈಜಲು ತಿಳಿದಿದ್ದರೂ, ನೀರಿನ ಸೆಳೆತ ಅಥವಾ ಆಳದ ಅಂದಾಜು ತಪ್ಪಿದ್ದರಿಂದ ರಕ್ಷಿತ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಕಡಬ ಪೊಲೀಸರು ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೂಕ್ತ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗಿಲ್ಲ. ನೀರಿನಲ್ಲಿ ಹುಡುಕಾಟ ನಡೆಸುವುದಕ್ಕಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದವರ ನೆರವು ಪಡೆಯಲು ನಿರ್ಧರಿಸಲಾಗಿದ್ದು, ಕತ್ತಲಾದ ಕಾರಣ ಶೋಧ ಕಾರ್ಯವನ್ನು ಮಂಗಳವಾರ ಬೆಳಗ್ಗೆ ಮುಂದುವರಿಸುವ ಸಾಧ್ಯತೆಗಳಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !