ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಪಾರ್ಟಿ ನೆಪದಲ್ಲಿ ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ.ಆರೋಪಿಗಳಲ್ಲೊಬ್ಬನಾದ ಸೋಮಶೇಖರ್ ಎಂಬಾತ, “ಕಲಬುರ್ಗಿಯಿಂದ ನಮ್ಮ ಸ್ನೇಹಿತರು ಬಂದಿದ್ದಾರೆ” ಎಂದು ಹೇಳಿ ಪಾರ್ಟಿ ಮಾಡುವ ನೆಪದಲ್ಲಿ ಯುವತಿಯನ್ನು ಕರೆಸಿಕೊಂಡಿದ್ದಾನೆ.
ದೇವನಹಳ್ಳಿ ಭಾಗದಲ್ಲಿ ವಾಸವಿದ್ದ ಯುವತಿ ಸ್ನೇಹಿತನ ಮಾತು ನಂಬಿ ಪಾರ್ಟಿಯ ಜಾಗಕ್ಕೆ ಹೋಗಿದ್ದಾಳೆ. ಅಲ್ಲಿ ಅಂಬರೀಶ ಎನ್ನುವಾತ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆ ಕಷ್ಟಪಟ್ಟು ಅಲ್ಲಿಂದ ಓಡಿಬಂದು ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಪೊಲೀಸರು ಎಲ್ಲ ಮಾಹಿತಿಯನ್ನು ಪಡೆದುಕೊಂಡು ತಕ್ಷಣ ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೊಂದೆಡೆ, ಸಂತ್ರಸ್ತ ಯುವತಿಯನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.



