ನಿಮ್ಮ ಸಾಧನೆ ದೇಶದ ಕ್ರೀಡಾ ಭವಿಷ್ಯಕ್ಕೆ ದಾರಿದೀಪ: ಏಷ್ಯನ್‌ ಗೇಮ್ಸ್‌ ಸಾಧಕರೊಂದಿಗೆ ಪ್ರಧಾನಿ ಮೋದಿ ಸಂವಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

19ನೇ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಗೈದ ಭಾರತೀಯ ಕ್ರೀಡಾಪಟುಗಳನ್ನು ಇಂದು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

ದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಮಂಗಳವಾರ ಭಾರತೀಯ ಅಥ್ಲೀಟ್​​ಗಳನ್ನು ಭೇಟಿ ಮಾಡಿದ ಮೋದಿ, ಸಂವಾದ ನಡೆಸಿದ ಅವರು, 140 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮೆಲ್ಲರನ್ನು (ಕ್ರೀಡಾಪಟುಗಳನ್ನು) ಸ್ವಾಗತಿಸುತ್ತೇನೆ. ನಿಮ್ಮ ಪರಿಶ್ರಮ ಮತ್ತು ಸಾಧನೆಯಿಂದಾಗಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ನಾವು ಎಂದಿಗೂ ಪ್ರತಿಭೆಗಳ ಕೊರತೆಯನ್ನು ಹೊಂದಿರಲಿಲ್ಲ. ಆದರೆ ಹಲವಾರು ಅಡೆತಡೆಗಳಿಂದಾಗಿ, ನಮ್ಮ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪದಕಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಆದ್ರೆ ಕ್ರೀಡಾಪಟುಗಳು ಅತ್ಯುತ್ತಮವಾದುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸದಾ ಎಲ್ಲಾ ರೀತಿಯ ನೆರವುಗಳನ್ನು ನೀಡಲಿದೆ ಎಂದು ಭರವಸೆ ನೀಡಿದರು

ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ 100 ಪದಕಗಳನ್ನು ದಾಟಿದ್ದೀರಿ. ಮುಂದಿನ ಬಾರಿ, ನಾವು ಈ ದಾಖಲೆಯನ್ನು ಮೀರಿ ಹೋಗುತ್ತೇವೆ ಎಂಬ ವಿಶ್ವಾಸವಿದೆ. ಮುಂದಿನ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಎಂದು ಹುರಿದುಂಬಿಸಿದರು.

ಏಷ್ಯನ್ ಗೇಮ್ಸ್​ ದೇಶದ ಕ್ರೀಡೆಯ ಭವಿಷ್ಯಕ್ಕೆ ಉತ್ತಮ ದಾರಿದೀಪವಾಗಿದೆ. ಪದಕ ವಿಜೇತರು ಹೊಸ ಮಾರ್ಗಗಳನ್ನು ತೆರೆದು ಹೊಸ ಪೀಳಿಗೆಯನ್ನುಪ್ರೇರೇಪಿಸುತ್ತದೆ ಎಂದು ಮೋದಿ ಹೇಳಿದರು.

ಇಂದು ನಮ್ಮ ಮಹಿಳೆಯರು ಅದ್ಭುತ ಪ್ರದರ್ಶನ ನೀಡಿದ್ದಾರೆ. ದೇಶದ ಮಹಿಳೆಯರ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ಅರ್ಧದಷ್ಟು ಪದಕಗಳನ್ನು ಮಹಿಳೆಯರೇ ಗೆದ್ದಿದ್ದಾರೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ, ಅವರು ಚಿನ್ನದ ಪದಕಕ್ಕಿಂತ ಕಡಿಮೆ ಏನನ್ನೂ ಗೆಲ್ಲಲು ಸಿದ್ಧರಿರಲಿಲ್ಲ ಎಂದು ನನಗನಿಸಿದೆ. ಈ ಎಲ್ಲಾ ಸಾಧನೆಯ ಹಿಂದೆ ಕ್ರೀಡಾ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾದ ಖೇಲೋ ಇಂಡಿಯಾ ಕೊಡುಗೆ ಕೂಡ ಇದೆ. ಹೀಗಾಗಿ ಈ ಬಾರಿ ದೊಡ್ಡ ಯಶಸ್ಸನ್ನು ಕಂಡಿದೆ ಎಂದರು.

ಈ ಬಾರಿಯ ಏಷ್ಯನ್​ ಗೇಮ್ಸ್​ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳಲ್ಲಿ 125 ಕ್ರೀಡಾಪಟುಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳು. ಇವರು 40 ಪದಕಗಳನ್ನು ಗೆದ್ದಿದ್ದಾರೆ. ಇದು ಖೇಲೋ ಇಂಡಿಯಾ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಇಂದು ಖೇಲೋ ಇಂಡಿಯಾ ಅಡಿಯಲ್ಲಿ 3,000 ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. 25 ಸಾವಿರ ಕೋಟಿ ನೆರವು ನೀಡಲಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರವು ಕ್ರೀಡಾಪಟುಗಳಿಗೆ ಹೆಚ್ಚುವರಿಯಾಗಿ 3000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು.

‘ಡ್ರಗ್ ಮುಕ್ತ ಭಾರತ’ ಸಂದೇಶ ನೀಡಿ
ಮಾತು ಮುಂದುವರಿಸಿ , ನಮ್ಮ ದೇಶ ಪ್ರಸ್ತುತ ಡ್ರಗ್ಸ್ ವಿರುದ್ಧ ನಿರ್ಣಾಯಕ ಹೋರಾಟದಲ್ಲಿ ತೊಡಗಿದೆ. ಅದರ ದುಷ್ಟರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆ. ಕ್ರೀಡಾಪಟುಗಳು ಅರಿವಿಲ್ಲದೆ ತೆಗೆದುಕೊಳ್ಳುವ ಡ್ರಗ್ಸ್‌ನಿಂದ ಅವರ ವೃತ್ತಿಜೀವನ ನಾಶವಾಗುತ್ತದೆ. ನಿಮ್ಮ ಮೂಲಕ (ಕ್ರೀಡಾಪಟುಗಳು) ಯುವಕರಲ್ಲಿ ಜಾಗೃತಿ ಮೂಡಿಸಲು ನಾನು ಬಯಸುತ್ತೇನೆ. ನೀವು ಮಾನಸಿಕ ಶಕ್ತಿ ಮತ್ತು ಬದ್ಧತೆಯ ಆರಾಧ್ಯ ದೈವವಾಗಿದ್ದೀರಿ. ನಿಮ್ಮ ದೈಹಿಕ ಶಕ್ತಿಯನ್ನು ಬಳಸಿಕೊಂಡು ನೀವು ಪದಕಗಳನ್ನು ಗೆಲ್ಲುತ್ತೀರಿ. ಮಾನಸಿಕ ಸಾಮರ್ಥ್ಯವು ದೊಡ್ಡ ಪಾತ್ರ ವಹಿಸುತ್ತದೆ. ಡ್ರಗ್ಸ್‌ನ ಋಣಾತ್ಮಕ ಪರಿಣಾಮಗಳ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವಲ್ಲಿ ನೀವು ದೊಡ್ಡ ಬ್ರ್ಯಾಂಡ್ ಅಂಬಾಸಿಡರ್ ಎಂದು ಮೋದಿ ಎಂದರು.

ಭಾರತ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದೆ. 1965ರ ನಂತರ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. 20ಕ್ಕೂ ಹೆಚ್ಚು ಚಿನ್ನ, 30 ಹೆಚ್ಚು ಬೆಳ್ಳಿ, 40 ಹೆಚ್ಚು ಕಂಚು ಸೇರಿದಂತೆ ಒಟ್ಟು 107 ಪದಕ ಸಾಧನೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!