ಹೊಸದಿಗಂತ ವರದಿ,ಮೈಸೂರು:
ಪ್ರಕೃತಿಯಷ್ಟು ಸುಂದರವಾದದ್ದು ಯಾವುದು ಇಲ್ಲ. ಪ್ರಕೃತಿಯನ್ನು ಪ್ರೀತಿಸಿದರೆ ಅದು ನಮ್ಮನ್ನು ಪ್ರೀತಿಸುತ್ತದೆ. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರಕೃತಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುವುದನ್ನು ಟಿ.ನರಸೀಪುರದ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಅದ್ಭುತವಾಗಿ ತಿಳಿಸಿದರು.
ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 5ನೇ ಯುವ ಸಂಭ್ರಮದಲ್ಲಿ ಪ್ರಕೃತಿಯ ರಕ್ಷಣೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪರಿಸರ ಪ್ರೇಮೆ ಸಾಲುಮರದ ತಿಮಕ್ಕ ಅವರ ಮಾದರಿಯಲ್ಲೇ ನಾವೂ ಸಾಗಬೇಕು ಎಂದು ಅಮೋಘ ನೃತ್ಯದ ಮೂಲಕ ಸಂದೇಶ ನೀಡಿದರು.
ಟಿ.ನರಸೀಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ವಿದ್ಯಾರ್ಥಿಗಳು ಸೋಲಿಲ್ಲದ ಸರದಾರ ಚಿತ್ರದ ಈ ಕನ್ನಡ ಮಣ್ಣನು ಮರೆಬೇಡ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕರ್ನಾಟದ ಹಿರಿಮೆ, ಕರ್ನಾಟದ ವೈಭವ ಹಾಗೂ ಇತಿಹಾಸವನ್ನು ನೆರೆದಿದ್ದಿ ಯುವ ಸಮೂಹಗಳ ಕಣ್ಣಮುಂದೆ ಪ್ರಸ್ತುತ ಪಡಿಸಿದರು.
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಸಂಗೋಳ್ಳಿರಾಯಣ್ಣನ ಜೀವನ ಚರಿತ್ರೆಯನ್ನು ಹಾಗೂ ದೇಶ ಪ್ರೇಮವನ್ನು ಪ್ರಸ್ತುತ ಪಡಿಸುತ್ತಾ ನೋಡುಗರನ್ನು ಕುಣಿದು ಕುಪ್ಪಳ್ಳಿಸುವಂತೆ ಮಾಡಿದರು.
ಮಂಡ್ಯದ ಮಾಂಡವ್ಯ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಹೆಮ್ಮೆ ಪಡುವ ಇತಿಹಾಸವನ್ನು, ವೈಶಾಲ್ಯತೆ ಬಗ್ಗೆ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಹಾಡಿಗೆ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ವೀರ ಕನ್ನಡಿಗ ಚಿತ್ರಗೀತೆಗೆ ಹೆಜ್ಜೆ ಹಾಕುತ್ತಿದ್ದಂತೆ ನೆರೆದಿದ್ದ ಯುವ ಸಮೂಹ ಜೈ ಕಾರ ಹಾಕಿದರು.
ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಪೂರ್ವ ಕಾಲೇಕಿನ ವಿದ್ಯಾರ್ಥಿಗಳು ದೇಶ ಪ್ರೇಮದ ಬಗ್ಗೆ ನೃತ್ಯದ ಮೂಲಕ ರಂಜಿಸಿದರೆ, ಮಂಡ್ಯದ ಪದ್ಮ ಜಿ.ಮಾದೇಗೌಡ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಬಾವೈಕ್ಯತೆ ಬಗ್ಗೆ ನರ್ತಿಸುವ ಮೂಲಕ ತಿಳಿಸಿ ಜನರ ಮನಗೆದ್ದರು.
ಪಿರಿಯಾಪಟ್ಟಣದ ಜಾಗೃತಿ ಕೈಗಾರಿಕ ಸಂಸ್ಥೆ ವಿಧ್ಯಾರ್ಥಿಗಳು ಭಾರತದ ಯೋದರ ದೇಶ ಪ್ರೇಮದ ಬಗ್ಗೆ ನೃತ್ಯದ ಮೂಲಕ ತಿಳಿಸಿ ಪ್ರೇಕ್ಷಕರನ್ನು ಮನರಂಜಿಸಿದರು. ಹುಣಸೂರಿನ ಶ್ರೀ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾರತದ ಸೇನೆಯು ಪುಲ್ವಾಮ ದಾಳಿಗೆ ನಡೆಸಿದ ಉಗ್ರರ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಕಣ್ಣಮುಂದೆ ತಂದರು.
ಮಂಡ್ಯದ ಭಾರತೀ ಕಾಲೇಜಿನ ವಿದ್ಯಾರ್ಥಿಗಳ ತಂಡವು ಜಗತ್ತೆ ತನ್ನತ್ತ ತಿರುಗಿ ನೋಡುವೆಂತೆ ಸಾಧನೆ ಮಾಡಿದ ದೇಶದ ಹೆಮ್ಮಯ ಇಸ್ರೋದ ಯೋಜನೆಯಾದ ಚಂದ್ರಯಾನ3 ಬಗ್ಗೆ ವಿವಿಧ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿ ತಿಳಿಸುತ್ತಿದ್ದಂತೆ ಪ್ರತಿಯೊಬ್ಬರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ಆನಂದಿಸಿದರು.
ರಾಮಮಗರದ ಶ್ರೀ ಶಾರದ ಪ್ರಥಮ ದರ್ಜೆ ಕಾಲೇಜಿನ ಕರ್ನಾಟಕದ ಜಾನಪದ ಕಲೆ ಹಾಗೂ ಸಂಸ್ಕೃತಿಯನ್ನು ತಿಳಿಸುವ ಸಲುವಾಗಿ ವಿವಿಧ ಜನಪದ ಗೀತೆಗಳಿಗೆ ವೀರಗಾಸೆ ಕುಣಿತ, ಕಂಸಾಳೆ ಕುಣಿತ ಸೇರಿದಂತೆ ಅನೇಕ ರೀತಿಯ ಕುಣಿತ ಮಾಡಿ ಚಾಮುಂಡೇಶ್ವರಿಯ ಶಕ್ತಿಯನ್ನು ಪ್ರಸ್ತುತ ಪಡಿಸಿ ಯುವ ಸಮೂಹವನ್ನು ರಂಜಿಸಿದರು. ಹೆಚ್.ಡಿ.ಕೋಟೆಯ ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಗೀತೆ ಚೆಲ್ಲಿದೆರೂ ಮಲ್ಲಿಗೆಯಾ ಹಾಡಿಗೆ ನರ್ತಿಸಿದರು.