ನಿಮ್ಮ ತರ್ಕಬದ್ಧ ಮಾತು ಅದ್ಭುತ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾರ ‘ಅಪ್ ಕಾ ಅದಾಲತ್’ ವೀಕ್ಷಿಸಲು ಪ್ರಧಾನಿ ಮೋದಿ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಒವೈಸಿ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧವಿ ಲತಾ ಅವರ ಸಂದರ್ಶನವೊಂದನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಿದ್ದು, ಎಲ್ಲರೂ ಈ ಅದ್ಭುತವಾದ ಸಂದರ್ಶನವನ್ನು ವೀಕ್ಷಿಸುವಂತೆ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದ ಭರಾಟೆಯ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್‌ನಲ್ಲಿ ಹೈದರಾಬಾದ್‌ನಿಂದ ಲೋಕಸಭೆ ಚುನಾವಣೆಗೆ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರನ್ನು ಹಾಡಿ ಹೊಗಳಿದ್ದಾರೆ.

‘ಮಾಧವಿ ಲತಾ ಜೀ, ನಿಮ್ಮ ‘ಆಪ್ ಕಿ ಅದಾಲತ್’ ಎಪಿಸೋಡ್ ಅದ್ಭುತವಾಗಿತ್ತು. ನೀವು ತುಂಬಾ ಸಧೃಡವಾಡ ಅಂಶಗಳನ್ನು ಉಲ್ಲೇಖಿಸಿದ್ದೀರಿ ಜೊತೆಗೆ ನಿಮ್ಮ ವಾದ ತರ್ಕಬದ್ಧವಾಗಿತ್ತು ಉತ್ಸಾಹದಿಂದ ಕೂಡಿತ್ತು. ನಿಮಗೆ ನನ್ನ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಪ್ರಧಾನ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವಿ ಅವರು, ‘ಮೋದಿ ಜೀ, ಸತ್ಯವನ್ನು ನಿರ್ಭೀತಿಯಿಂದ ಮಾತನಾಡುವ ಧೈರ್ಯ ನಿಮ್ಮಿಂದ ಮಾತ್ರ ನನಗೆ ಸಿಕ್ಕಿತು ಮತ್ತು ನಮ್ಮ ಪಕ್ಷದ ಧ್ಯೇಯವಾದ ಸಬ್ ಕಾ ಸಾಥ್ ಸಭ್ ಕಾ ವಿಕಾಸ್ ( SabkaSathSabkaVikas)ನನ್ನ ಸ್ಫೂರ್ತಿಯಾಗಿದೆ. ರಾಷ್ಟ್ರವು ಒಗ್ಗಟ್ಟಿನಿಂದ ಮುನ್ನಡೆದರೆ ಮಾತ್ರ ನಾವು ಪ್ರಗತಿ ಹೊಂದುತ್ತೇವೆ ಎಂದು ಕೊನೆಯ ಉಸಿರು ಇರುವವರೆಗೂ ನೀವು ತೋರಿಸಿದ ಮಾರ್ಗವನ್ನು ನಾವು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.

ಇಂಡಿಯಾ ಟಿವಿಯಲ್ಲಿ ಪ್ರಸಾರವಾಗಿರುವ ಆಫ್ ಕಿ ಅದಾಲತ್‌ ಶೋದಲ್ಲಿ ಮಾಧವಿ ಲತಾ ಮಾತನಾಡಿದ್ದು, ತನ್ನ ಪ್ರತಿಸ್ಪರ್ಧಿ ಎಐಎಂಐಎಂನಿಂದ ಕಣಕ್ಕಿಳಿದಿರುವ ಹಾಲಿ ಸಂಸದ ಓವೈಸಿ ಈ ಬಾರಿಯ ಚುನಾವಣೆಯಲ್ಲಿ 1 ಲಕ್ಷದ 50,000 ಮತಗಳ ಅಂತರದಿಂದ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕಳೆದ ಚುನಾವಣೆಯಲ್ಲಿ ಓವೈಸಿ 6 ಲಕ್ಷ ಬೋಗಸ್ ಮತಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ಮಾಧವಿ ಲತಾ, ನಮ್ಮಲ್ಲಿ ಬೋಗಸ್ ಮತಗಳಿದ್ದರೆ 4 ಸಾವಿರ ವರ್ಷಗಳವರೆಗೆ ನಿರಂತರವಾಗಿ ಗೆಲ್ಲಬಹುದು. ಆದರೆ ಏನು ಮಾಡುವುದು? ನಮ್ಮ ಬಳಿ ಬೋಗಸ್ ಮತಗಳಿಲ್ಲ. ಓವೈಸಿ ಬಳಿ 6,20,000 ಬೋಗಸ್ ಮತಗಳಿವೆ. ನೀವು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಒಂದು ಇಪಿಕ್‌ (EPIC) ಸಂಖ್ಯೆಯನ್ನು ಟೈಪ್ ಮಾಡಿದರೆ, ನೀವು ಒಂದೇ ವೋಟರ್ ಐಡಿಯನ್ನು ಎರಡು ಸ್ಥಳಗಳಲ್ಲಿ ಕಾಣಬಹುದು. ಕೇವಲ ಹೈದರಾಬಾದ್‌ನ ಚಾರ್‌ಮಿನಾರ್ ಪ್ರದೇಶವೊಂದರಲ್ಲಿಯೇ ಅವರು 1,60,000 ನಕಲಿ ಮತಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾಗ್ಯನಗರಿ ಮುತ್ತಿನ ನಗರಿ ಎಂದೆಲ್ಲಾ ಹೆಸರಾಗಿರುವ ಹೈದರಾಬಾದ್ ಹೈಟೆಕ್ ಸಿಟಿ ಎಂದೂ ಹೆಸರುವಾಸಿಯಾಗಿದ್ದರೂ ಹೈದರಾಬಾದ್ ಲೋಕಸಭಾ ಕ್ಷೇತ್ರದ ಸ್ಥಿತಿ ಮಾತ್ರ ಸುಧಾರಿಸಿಲ್ಲ ಎಂದ ಅವರು ಇಲ್ಲಿ ಇತ್ತೀಚೆಗಷ್ಟೇ ಮುಸ್ಲಿಂ ಹುಡುಗಿಯನ್ನು 70 ವರ್ಷದ ಅರಬ್ ವ್ಯಕ್ತಿಗೆ ಮಾರಾಟ ಮಾಡಿದ ಘಟನೆಯನ್ನು ನೆನಪಿಸಿಕೊಂಡರು.

ಭಾರತದಲ್ಲಿ ನಾಸ್ಕಾಮ್ ನಡೆಸಿದ ಸಮೀಕ್ಷೆಯಲ್ಲಿ, ಕಳೆದ ವರ್ಷದಲ್ಲಿ 3 ಲಕ್ಷ ಐಟಿ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಅದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಹೈದರಾಬಾದ್‌ನಲ್ಲಿವೆ ಎಂದು ತಿಳಿದು ಬಂದಿದೆ. ಆದರೆ ಹೈದರಾಬಾದ್ ಲೋಕಸಭಾ ಕ್ಷೇತ್ರದ 2 ರಿಂದ 3% ದಷ್ಟು ಜನರೂ ಸಹ ಆ ಉದ್ಯೋಗಗಳನ್ನು ಪಡೆಕೊಂಡಿಲ್ಲ. ಮತ್ತು ಯಾರಾದರೂ ಈ ಕ್ಷೇತ್ರದ ಜನ ಒಳ್ಳೆಯ ಕೆಲಸ ಸಿಗುತ್ತದೆ ಎಂದಾದರೆ ಅವರು ಆ ಪ್ರದೇಶವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಾರೆ ಅವರು ಇಲ್ಲಿ ಉಳಿಯಲು ಬಯಸುವುದಿಲ್ಲ ಎಂದು ಮಾಧವಿ ಲತಾ ಹೇಳಿದ್ದಾರೆ.

ಇನ್ನು ಒವೈಸಿ ವಿರುದ್ಧ ತಮ್ಮ ಉಮೇದುದಾರಿಕೆ ಬಗ್ಗೆ ಮಾತನಾಡಿದ ಅವರು, ಟಿಕೆಟ್ ಸಿಕ್ಕ ಬಳಿಕ ಮೋದಿಜಿಯವರನ್ನು ಭೇಟಿಯಾಗಲು ಅವಕಾಶ ಸಿಗುತ್ತಿರುವುದು ನನ್ನ ಅದೃಷ್ಟ, ಅವರು ಈ ಯುಗದ ಮಹಾಯೋಗಿ. ನನ್ನನ್ನು ಭೇಟಿಯಾಗದೆ ಅಥವಾ ನನಗೆ ಗೊತ್ತಿಲ್ಲದೆ, ಅವರು ನನ್ನ ಸಾಮಾಜಿಕ ಕೆಲಸದ ಆಧಾರದ ಮೇಲೆ ಮಾತ್ರ ನನ್ನನ್ನು ಆಯ್ಕೆ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ನಾನು ಸಮಾಜ ಸುಧಾರಣೆಯ ಕೆಲಸದಲ್ಲಿ ತೊಡಗಿದ್ದೇನೆ ಮುಂದಿನ 8 ರಿಂದ 10 ತಿಂಗಳುಗಳಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದಲ್ಲಿ 1,009 ಸಾಮಾನ್ಯ ಹೆರಿಗೆಗಳನ್ನು ಉಚಿತವಾಗಿ ಖಾತ್ರಿಪಡಿಸುವ ಭರವಸೆ ನೀಡಿದ್ದೇನೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!