August 4, 2026
Tuesday, August 4, 2026
spot_img

‘ನಿಮ್ಮ ಪ್ರಾರ್ಥನೆಯೇ ನನ್ನನ್ನು ಬದುಕಿಸಿತು’: ‘ಸರ್ವೈವರ್’ ಪ್ರೋಮೋ ಬಿಚ್ಚಿಟ್ಟಿತು ಶಿವಣ್ಣನ ಕಷ್ಟದ ದಿನಗಳ ಕಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್ ಡಾ. ಶಿವರಾಜ್‌ಕುಮಾರ್ ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ಅತ್ಯಂತ ಭಾವುಕ ಗಿಫ್ಟ್ ಸಿಕ್ಕಿದೆ. ಶಿವಣ್ಣ ಜೀವನದ ಏಳುಬೀಳುಗಳು, ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಅವರು ಎದುರಿಸಿದ ಆರೋಗ್ಯದ ಏರುಪೇರು ಮತ್ತು ಅದರಿಂದ ಅವರು ಹೇಗೆ ಫೀನಿಕ್ಸ್‌ನಂತೆ ಎದ್ದು ಬಂದರು ಎಂಬುದನ್ನು ತೋರಿಸುವ ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಕಷ್ಟದ ದಿನಗಳ ಅನಾವರಣ:

ಈ ಸಾಕ್ಷ್ಯಚಿತ್ರದಲ್ಲಿ ಶಿವಣ್ಣ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ನೋವುಗಳು, ಚಿತ್ರರಂಗದ ಆರಂಭಿಕ ದಿನಗಳ ಸವಾಲುಗಳು ಮತ್ತು ಇತ್ತೀಚಿನ ಗಂಭೀರ ಆರೋಗ್ಯ ಸಮಸ್ಯೆಯ ಹೋರಾಟದ ನೈಜ ಚಿತ್ರಣವಿದೆ. ಈ ಕಷ್ಟದ ಸಮಯದಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಶಿವಣ್ಣಗೆ ಹೇಗೆ ಧೈರ್ಯ ತುಂಬಿ ಕಾಯ್ದುಕೊಂಡರು ಎಂಬ ಭಾವುಕ ಕ್ಷಣಗಳನ್ನು ಈ ಪ್ರೋಮೋದಲ್ಲಿ ಹಂಚಿಕೊಳ್ಳಲಾಗಿದೆ.

“ನಿಮ್ಮ ಪ್ರಾರ್ಥನೆಯೇ ನನ್ನನ್ನು ಬದುಕಿಸಿತು” – ಶಿವಣ್ಣ ಭಾವುಕ

ಸಾಕ್ಷ್ಯಚಿತ್ರದ ಪ್ರೋಮೋ ಹಂಚಿಕೊಂಡು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಶಿವಣ್ಣ, “ನಾನು ಚಿಕಿತ್ಸೆಗೆ ಹೋಗುವಾಗ ನಿಮ್ಮ ಹಾರೈಕೆಯನ್ನು ಹೊತ್ತು ಹೋಗಿದ್ದೆ, ಅಲ್ಲಿರುವಾಗ ನಿಮ್ಮ ಪ್ರಾರ್ಥನೆಯನ್ನು ಸ್ಮರಿಸುತ್ತಿದ್ದೆ, ಮರಳಿ ಬಂದ ಮೇಲೆ ನಿಮ್ಮ ಸಂತೋಷದಲ್ಲಿ ಭಾಗಿಯಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ಈ ಯುದ್ಧವನ್ನು ಗೆದ್ದು ಬಂದ ಕಥೆಯನ್ನು ಹೇಳಲು ‘ಸರ್ವೈವರ್’ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ” ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಭಿಮಾನಿಗಳ ಕಣ್ಣಾಲಿಗಳು ಒದ್ದೆ:

ಸದಾ ಲವಲವಿಕೆಯಿಂದ ಇರುತ್ತಿದ್ದ ತಮ್ಮ ನೆಚ್ಚಿನ ನಟ ಪಟ್ಟ ಕಷ್ಟಗಳನ್ನು ಪರದೆಯ ಮೇಲೆ ನೋಡಿ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ:

ರಿಯಲ್ ಲೈಫ್‌ನಲ್ಲೂ ಶಿವಣ್ಣನೇ ‘ಸರ್ವೈವರ್’

ಅರವತ್ತರ ಹರೆಯದಲ್ಲೂ ಯುವಕರಿಗಿಂತ ವೇಗವಾಗಿ ಡ್ಯಾನ್ಸ್, ಫೈಟ್ ಮಾಡುವ ಶಿವಣ್ಣ, ಇತ್ತೀಚೆಗೆ ವಿದೇಶದಲ್ಲಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಕಾಯಿಲೆಯನ್ನು ಗೆದ್ದು, ಶೂಟಿಂಗ್ ಸೆಟ್‌ಗೆ ಮರಳಿ ಕರಗದ ಎನರ್ಜಿಯೊಂದಿಗೆ ನಟಿಸುತ್ತಿರುವುದೇ ಈ ಸಾಕ್ಷ್ಯಚಿತ್ರಕ್ಕೆ ‘ಸರ್ವೈವರ್’ ಎಂಬ ಹೆಸರಿಡಲು ಮುಖ್ಯ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !