Monday, March 27, 2023

Latest Posts

ಯುವ ಸಮೂಹವೇ ಡ್ರಗ್ಸ್ ಗೆ ಬಲಿಯಾಗದಿರಿ: ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್

ಹೊಸದಿಗಂತ ವರದಿ, ಕಲಬುರಗಿ:

ದೇಶದ ಭವಿಷ್ಯದ ಪ್ರಜೆಗಳಾಗಿರುವ ಯುವ ಸಮೂಹ ಸಮಾಜಕ್ಕೆ ಮಾರಕವಾದ ಡ್ರಗ್ಸ್‍ಗೆ ಬಲಿಯಾಗಬಾರದೆಂದು ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಇಶಾ ಪಂತ್ ಅವರು ಕರೆ ನೀಡಿದರು.

ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್.ಎಸ್.ಎಸ್.ಕೋಶ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಮಾ.9ರ ವರೆಗೆ ಆಯೋಜಿಸಿದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಣಿಕ ಸುಖಕ್ಕಾಗಿ ಸ್ನೇಹಿತರೊಂದಿಗೆ ಆರಂಭಿಸಲಾಗುವ ಮಾದಕ ವಸ್ತುಗಳ ಬಳಕೆ ತದನಂತರ ರೂಢಿ ಅಭ್ಯಾಸ ಮಾಡಿಕೊಂಡು ಅಮೂಲ್ಯ ಜೀವನವನ್ನು ಕಳೆದಕೊಂಡ ಹಲವಾರು ನಿದರ್ಶನಗಳು ಕಂಡಿದ್ದೇವೆ. ನಿಮ್ಮ ಮೇಲೆ ಹೆತ್ತವರು ಕುಟುಂಬ ವರ್ಗ ಬೆಟ್ಟದಷ್ಟು ಅಸೆ, ಆಕಾಂಕ್ಷೆಗಳನ್ನು ಇಟ್ಟುಕೊಂಡಿರುವುದನ್ನು ಮರೆಯದಿರಿ. ಇರುವದೊಂದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದರು.

ಎಲ್ಲವು ಮೋಬೈಲ್‍ನಲ್ಲಿಲ್ಲ. ಮೊಬೈಲ್ ಹೊರತಾಗಿ ಜಗತ್ತು ವಿಶಾಲವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವೆದೆಲ್ಲ ಸತ್ಯವಲ್ಲ ಎಂದ ಅವರು ವಿಶ್ವದಲ್ಲಿಯೇ ಭಾರತ ಯುವ ದೇಶವಾಗಿದ್ದು, ಇದು ನಮ್ಮ ಆಸ್ತಿಯಾಗಿದೆ. ಭವಿಷ್ಯದಲ್ಲಿ ಬರಬಹುದಾದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದ ಅವರು ದೇಶವನ್ನು ಮತ್ತಷ್ಟು ಸದೃಢವನ್ನಾಗಿಸುವ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ ಎಂದರು.

ಕಲೆ, ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ ವಿಭಿನ್ನವಾದರು ಭಾರತೀಯರೆಲ್ಲರು ನಾವು ಒಂದೇ ಎಂದು ಸಾರುವ ಅನೇಕತೆಯಲ್ಲಿ ಏಕತೆ ಹೊಂದಿರುವ ಗಟ್ಟಿ ಪ್ರಜಾಪ್ರಭುತ್ವದ ದೇಶ ನಮ್ಮದಾಗಿದೆ. ಶಿಬಿರದಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳು ಪ್ರಸ್ತುತವಾಗಿದ್ದು, ಶಿಬಿರದಲ್ಲಿ 6 ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರಿಂದ ಪರಸ್ಪರ ಕಲೆ, ಸಂಸ್ಕೃತಿಯ ಅರ್ಥ ಮಾಡಿಕೊಂಡು ಗೌರವಿಸಿ ಎಂದರು.

ಗುಲಬರ್ಗಾ ವಿ.ವಿ ಪ್ರೋ. ದಯಾನಂದ ಅಗಸರ್ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಸಂಪತ ಕುಮಾರ ಲೋಯಾ, ಅಕಾಡೆಮಿಕ್ ಸದಸ್ಯ ಬಸವರಾಜ ಪವಾರ, ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ, ಕುಲಸಚಿವೆ (ಪರೀಕ್ಷಾಂಗ) ಡಾ. ಮೇಧವಿನಿ ಎಸ್. ಕಟ್ಟಿ ಇದ್ದರು.

ಏಳು ದಿನಗಳ ಕಾಲ ನಡೆಯಲಿರುವ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕವು ಸೇರಿದಂತೆ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣಾ ಹಾಗೂ ತಮಿಳುನಾಡು ರಾಜ್ಯದ 150 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!