ಕಲಾರಾಧನೆಯಲ್ಲಿ ಯುವಜನತೆ ಪಾಲ್ಗೊಳ್ಳಬೇಕು: ಎಡನೀರು ಶ್ರೀ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ಪುರಾಣಗಳನ್ನು ತಿಳಿಸುವ ಯಕ್ಷಗಾನದಂತಹ ಕಲಾರಾಧನೆಯಲ್ಲಿ ಯುವಜನತೆ ಪಾಲ್ಗೊಳ್ಳಬೇಕು. ಪೌರಾಣಿಕ ಕತೆಗಳ ಜ್ಞಾನ ಪಡೆದುಕೊಂಡು ನಾಳಿನ ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಬೇಕು ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕರೆ ನೀಡಿದರು.

ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಎಡನೀರು ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಶ್ರೀ ಎಡನೀರು ಮಠದಲ್ಲಿ ಜರಗಿದ ತಾಳಮದ್ದಳೆ ಅಷ್ಟಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ೫೦ ವರ್ಷಗಳ ಹಿಂದೆಯೇ ಹಿರಿಯ ಗುರುಗಳು ದೇವರಿಗೆ ಸೇವಾರೂಪದಲ್ಲಿ ತಾಳಮದ್ದಳೆ ಆಯೋಜಿಸಿಕೊಂಡು ಬರುತ್ತಿದ್ದರು. ತಾಳಮದ್ದಳೆಗಳು ಯಕ್ಷಾಭಿಮಾನಿಗಳ ಮನಮುಟ್ಟಿದೆ. ಪ್ರೇಕ್ಷಕರು ಮೆಚ್ಚುವ ರೀತಿಯಲ್ಲಿ ೮ ದಿನಗಳ ಕಾಲ ತಾಳಮದ್ದಳೆ ನಡೆದಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಮಾರೋಪ ಭಾಷಣವನ್ನು ಮಾಡಿದರು.

ಕರ್ನಾಟಕ ಸರಕಾರದ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಡಾ.  ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಡಾ. ಟಿ. ಶ್ಯಾಮ ಭಟ್ ಐಎಎಸ್ ಮಾತನಾಡಿ ಯಕ್ಷಗಾನವು ಬ್ರಹ್ಮೈಕ್ಯ ಶ್ರೀಗಳಿಗೆ ಅತ್ಯಂತ ಪ್ರಿಯವಾದ ಕಲೆಯಾಗಿದೆ. ಅವರ ಸ್ಮರಣೆಗಾಗಿ ಅಷ್ಟಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ೮ ದಿನಗಳ ತಾಳಮದ್ದಳೆಯ ಸಂಯೋಜಕ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್ ಅವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು.

ಅತಿಥಿಗಳನ್ನು ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಯಕ್ಷಗಾನ ಕಲಾವಿದ ಹರೀಶ ಬಳಂತಿಮೊಗರು ವಂದಿಸಿದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!