Tuesday, March 28, 2023

Latest Posts

ಯುವ ಕಾಂಕ್ಲೇವ್ 2023: “ಭಾರತದ ಜ್ಞಾನ ವ್ಯವಸ್ಥೆ ಭಾಷೆ, ವಿಜ್ಞಾನ, ಗಣಿತಗಳೆಲ್ಲವನ್ನೊಳಗೊಂಡಿತ್ತು”

ಹೊಸದಿಗಂತ ವರದಿ ಬೆಳಗಾವಿ:

ನಮ್ಮ ಗುರುತಿಗಾಗಿ, ಸಂಸ್ಕೃತಿ ಸಂರಕ್ಷಣೆ, ಹೊಸ ಜ್ಞಾನದ ಆವಿಷ್ಕಾರಕ್ಕೆ ಭಾರತೀಯ ಜ್ಞಾನ ವ್ಯವಸ್ಥೆ ಅವಶ್ಯವಾಗಿದೆ ಎಂದು ಚಾಣಕ್ಯ ವಿವಿಯ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಿನಾಯಕ ರಜತ ಭಟ್ ಹೇಳಿದರು. ಬೆಳಗಾವಿ ನಗರದ ಕೆಎಲ್‌ಎಸ್ ಗೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಯುವ-2023 ಸಮ್ಮೇಳನದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ ಕುರಿತು ಅವರು ಮಾತನಾಡಿದರು.

ಭಾರತೀಯ ಜ್ಞಾನ ಪರಂಪರೆ ಸಾಗರದಷ್ಟು ವಿಶಾಲವಾಗಿದೆ. ನಮ್ಮ ಜ್ಞಾನ ಕೇವಲ ದಾಖಲೆಗಳಾಗಿಲ್ಲ ಬದಲಾಗಿ ಆಚರಣೆಗಳಾಗಿವೆ. ಉಳಿದ ನಾಗರಿಕತೆಗಳಿಗಿಂತ ನಮ್ಮ ಜ್ಞಾನದ ಮೂಲ ಶಕ್ತಿಯಾಗಿರುವ ಕಾರಣ ನಾವು ಮುಂದುವರೆದಿದ್ದೇವೆ.

ಭಾರತೀಯ ಜ್ಞಾನ ವ್ಯವಸ್ಥೆ ಕುರಿತು ಅನೇಕ ಮಿಥ್ಯಗಳಿವೆ. ತಥ್ಯಗಳನ್ನು ಗಮನಿಸಿದಾಗ ಇದು ಕೇವಲ ವಿಷಯ ಪರಿಣಿತಿ ಅಲ್ಲ ಬದಲಾಗಿ ಎಲ್ಲ ಜ್ಞಾನಗಳ ಸಮ್ಮಿಶ್ರಣ. ಬಹುತೇಕವಾಗಿ ಇದನ್ನು ಸಂಸ್ಕೃತಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಆದರೆ ಸಂಸ್ಕೃತ ಎಲ್ಲ ಭಾಷೆಗಳಂತೆ ಒಂದಾಗಿದೆ. ಇದು ಪ್ರಾಚೀನವೂ ಅಲ್ಲ, ಹಿಂದೂಗಳು ಬರೆದಿಲ್ಲ. ಜೈನ, ಬೌದ್ಧ ಪಂಥಗಳು ಭಾರತೀಯ ಜ್ಞಾನ ವ್ಯವಸ್ಥೆಗೆ ಕೊಡುಗೆ ನೀಡಿವೆ. ಇದು ಕೇವಲ ಆಧ್ಯಾತ್ಮಿಕವಲ್ಲ. ಭಾಷಾಶಾಸ್ತ್ರ, ಆರೋಗ್ಯ ವಿಜ್ಞಾನ, ಗಣಿತ, ಕಾವ್ಯ, ಲೋಹಶಾಸ್ತ್ರ, ಜ್ಯೋತಿಷ್ಯ ಹಾಗೂ ಉಳಿದ ಎಲ್ಲ ವಿಜ್ಞಾನಗಳು ಒಳಗೊಂಡಿವೆ ಎಂದು ಹೇಳಿದರು.

ಅಯೋಧ್ಯೆಯ ಮಹತ್ವ ಹಾಗೂ ಪ್ರಸ್ತುತತೆ ಕುರಿತು ಲೇಖಕಿ ನೀನಾ ರೈ ಮಾತನಾಡಿ, ಮನುಕುಲಕ್ಕೆ ಮನು ಪಿತಾಮಹನಾಗಿದ್ದಾನೆ. ಅವನೇ ಅಯೋಧ್ಯೆಯ ಸೃಷ್ಟಿಕರ್ತ. ಅಯೋಧ್ಯೆ ಕೇವಲ ನಗರವಲ್ಲ, ನಮ್ಮ ಸನಾತನತೆಯ ಮೂಲ ಹಾಗೂ ಗುರುತು. ಅಯೋಧ್ಯೆ ಸೈನ್ಯದ ನಗರವಾಗಿ ವಿನ್ಯಾಸಗೊಂಡಿದೆ. ’ಅ’ ಹಾಗೂ ’ಯುಧ್ಯ’ ಎಂದರೆ ಅಜೇಯವಾದದ್ದು ಎಂಬರ್ಥ. ಕಾಲ್ದಳ, ಅಶ್ವದಳ, ರಥ, ಗಜದಳಗಳಿಂದ ಅಯೋಧ್ಯ ಸೈನ್ಯ ಬಲಿಷ್ಠವಾಗಿತ್ತು. ಕಾಲಕಳೆದಂತೆ ಅಯೋಧ್ಯೆ ಅನೇಕ ಆಕ್ರಮಣಗಳಿಗೆ ಒಳಗಾಗಿದೆ. ಎಷ್ಟೇ ಪೀಳಿಗೆ ಕಳೆದರೂ ಇಂದಿಗೂ ಅಯೋಧ್ಯ ನಮ್ಮ ಪಾಲಿಗೆ ಶ್ರದ್ಧಾ ಕೇಂದ್ರವಾಗಿದೆ. ಎಲ್ಲ ಸಂದರ್ಭಗಳಲ್ಲೂ ಧರ್ಮವನ್ನೇ ಎತ್ತಿ ಹಿಡಿದ ಕಾರಣ ಅಯೋಧ್ಯ ನಮಗೆ ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!