Monday, October 2, 2023

Latest Posts

ಯುವ ನಿಧಿ, ಅನ್ನಭಾಗ್ಯ ಗ್ಯಾರಂಟಿ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳ ಪೈಕಿ, ‘ಯುವ ನಿಧಿ ಯೋಜನೆ’ಯಡಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್‌) ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಎರಡೂ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿವೆ. ಶುಕ್ರವಾರ ನಡೆದ ಸಂಪುಟ ಸಭೆಯ ನಿರ್ಣಯದಂತೆ ಈ ಆದೇಶಗಳನ್ನು ನೀಡಲಾಗಿದೆ.

ಪದವಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು 2023ರಲ್ಲಿ ಪೂರೈಸುವವರಿಗೆ ‘ಯುವ ನಿಧಿ’ ಯೋಜನೆಯಡಿ ತಿಂಗಳಿಗೆ ₹ 3,000 ಮತ್ತು ₹ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಜುಲೈ ತಿಂಗಳಿನಿಂದ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ.

ಅನ್ನ ಭಾಗ್ಯ ಯೋಜನೆ ಮಾರ್ಗಸೂಚಿ

* ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯ ಉಚಿತವಾಗಿ ನೀಡುತ್ತಿದೆ.

* ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ಸಿಗಲಿದೆ.

* ಕುಟುಂಬದಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಯಂತೆ ಉಚಿತ ಅಕ್ಕಿ ಸಿಗಲಿದೆ.

* ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ.ಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ.

* ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆ.ಜಿ. ಹಾಗೂ ಬಿಪಿಎಲ್‌ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಒದಗಿಸುತ್ತಿದೆ. ಹೆಚ್ಚುವರಿ ಆಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

ಯುವ ನಿಧಿ ಮಾರ್ಗಸೂಚಿಗಳು

* ಉತ್ತೀರ್ಣರಾದ ನಂತರ ಆರು ತಿಂಗಳವರೆಗೂ ಯಾವುದೇ ಉದ್ಯೋಗ ದೊರಕದ ಕನ್ನಡಿಗರಿಗೆ ಯೋಜನೆ ಅನ್ವಯವಾಗಲಿದೆ.

* ಎರಡು ವರ್ಷಗಳವರೆಗೆ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬಹುದು. ಎರಡು ವರ್ಷಕ್ಕೂ ಮೊದಲೇ ಉದ್ಯೋಗ ದೊರೆತರೆ ಭತ್ಯೆ ಪಾವತಿ ಸ್ಥಗಿತಗೊಳಿಸಲಾಗುತ್ತದೆ.

* ನಿರುದ್ಯೋಗ ಸ್ಥಿತಿಯ ಕುರಿತು ಸ್ವತಂತ್ರ ಪರಿಶೀಲನೆ ನಡೆಸಲಾಗುತ್ತದೆ. ಉದ್ಯೋಗ ದೊರಕಿದ ಕುರಿತು ತಪ್ಪು ಮಾಹಿತಿ ನೀಡಿದರೆ ಅಥವಾ ಘೋಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

* ನೇರ ನಗದು ಪಾವತಿ ವ್ಯವಸ್ಥೆ ಮೂಲಕ ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಯಾರಿಗೆಲ್ಲ ಭತ್ಯೆ ಇಲ್ಲ?

* ಪದವಿ ಅಥವಾ ಡಿಪ್ಲೊಮಾ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವವರು.

* ಶಿಶಿಕ್ಷು (ಅಪ್ರೆಂಟಿಸ್‌ಶಿಪ್‌) ವೇತನ ಪಡೆಯುತ್ತಿರುವವರು.

* ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.

* ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!