Monday, November 28, 2022

Latest Posts

ಮುಂದಿನ 20 ದಿನದೊಳಗೆ ಸುರತ್ಕಲ್ ಟೋಲ್‌ಗೇಟ್ ತೆರವು: ನಳಿನ್‌ಕುಮಾರ್ ಕಟೀಲು

ಹೊಸದಿಗಂತ ವರದಿ,ಮಂಗಳೂರು:

ಸುರತ್ಕಲ್ ಟೋಲ್‌ಗೇಟ್ ಮುಂದಿನ ೨೦ ದಿನದೊಳಗೆ ತೆರವುಗೊಳ್ಳಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುರತ್ಕಲ್ ಟೋಲ್‌ಗೇಟ್ ತೆರವು ಮಾಡಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈಗಾಗಲೇ ತಿಳಿಸಿದ್ದಾರೆ. ಟೋಲ್ ತೆರವಿನ ಶೇ.೭೫ ಕೆಲಸ ಪೂರ್ಣಗೊಂಡಿದೆ. ಟೋಲ್‌ಗೇಟ್ ತೆರವು ಬಳಿಕ ಹೆದ್ದಾರಿ ನಿರ್ವಹಣೆ ಮಾಡುವುದು ಯಾರು ಎಂಬ ಸಮಸ್ಯೆ ಇತ್ಯರ್ಥವಾಗಿಲ್ಲ. ಅದಾದ ಬಳಿಕ ಸುರತ್ಕಲ್ ಟೋಲ್ ತೆರವುಗೊಳ್ಳಲಿದೆ. ಇದಕ್ಕಾಗಿ ಅಧಿಕಾರಿಗಳು ೨೦ ದಿನ ಸಮಯ ಕೇಳಿದ್ದಾರೆ. ಕಾನೂನಾತ್ಮಕ ಸಮಸ್ಯೆ ಬಗೆಹರಿದ ತಕ್ಷಣ ಟೋಲ್‌ಗೇಟ್ ತೆರವುಗೊಳ್ಳಲಿದೆ ಎಂದರು.
ಸುರತ್ಕಲ್ ಟೋಲ್‌ಗೇಟ್ ತೆರವು ಕಾರ್ಯಾಚರಣೆ ನಡೆಸುವ ಬಗ್ಗೆ ಹೋರಾಟ ಕೈಗೆತ್ತಿಕೊಂಡಿರುವವರ ಮನೆಗೆ ಪೊಲೀಸರು ರಾತ್ರಿ ವೇಳೆ ತೆರಳಿ, ನೋಟಿಸ್ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ಪ್ರಜಾಪ್ರಭುತ್ವದಲ್ಲಿ ಹೋರಾಟ ನಡೆಸಲು ಎಲ್ಲರಿಗೂ ಹಕ್ಕು ಇದೆ. ನಾವೂ ಈ ಹಿಂದೆ ಹೋರಾಟ ಮಾಡಿದ್ದೇವೆ. ಹೋರಾಟಗಾರರಿಗೆ ನೋಟಿಸ್ ನೀಡಿರುವುದು, ರಾತ್ರಿ ವೇಳೆ ಮನೆಗೆ ತೆರಳಿರುವುದು ತಪ್ಪು. ಈ ಬಗ್ಗೆ ನಾನು ಅಧಿಕಾರಿಗಳ ಬಳಿ ವಿಚಾರಿಸುತ್ತೇನೆ ಎಂದರು.
ಟೋಲ್ ವಿರುದ್ಧ ಹೋರಾಟದಲ್ಲಿ ಯಾವುದೇ ರಾಜಕೀಯ ಇರಬಾರದು. ರಾಜಕೀಯ ನುಸುಳಿದ ಕಾರಣ ಗೊಂದಲ ಉಂಟಾಗಿದೆ. ಟೋಲ್‌ಗೇಟ್ ನಿರ್ಮಾಣದ ಬಗ್ಗೆ ೨೦೧೨ರಲ್ಲಿ ನಿರ್ಧಾರವಾಗಿತ್ತು. ೨೦೧೩ರಲ್ಲಿ ಸುರತ್ಕಲ್ ಟೋಲ್‌ಗೇಟ್‌ಗೆ ಒಪ್ಪಿಗೆ ದೊರೆತಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರಕಾರವಿದ್ದು, ಆಸ್ಕರ್ ಫೆರ್ನಾಂಡಿಸ್ ಹೆದ್ದಾರಿ ಸಚಿವರಾಗಿದ್ದರು. ಅಂದು ಸುಮ್ಮನಿದ್ದವರು ಇಂದು ಹೋರಾಟಕ್ಕೆ ಇಳಿದಿದ್ದಾರೆ ಎಂದರು.
ಹೋರಾಟಗಾರರ ಮನವೊಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಹೋರಾಟಗಾರರು ಮುಂದಿನ ೨೦ ದಿನ ಕಾಯಬೇಕು. ಬಳಿಕ ಟೋಲ್‌ಗೇಟ್ ತೆರವುಗೊಳ್ಳುವುದು ನಿಶ್ಚಿತ ಎಂದು ನಳಿನ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!