ಹೊಸದಿಗಂತ ಡಿಜಿಟಲ್ ಡೆಸ್ಕ್:
“ಭವತೀ ಭಿಕ್ಷಾಂದೇಹಿ” ಎಂಬ ಧ್ಯೇಯದೊಂದಿಗೆ ಶ್ರೀ ಪೊಳಲಿ ದೇವಸ್ಥಾನದ ವಠಾರದಲ್ಲಿ ಭಿಕ್ಷಾಟನೆಗೈದ 80 ರ ಹರೆಯದ ವೃದ್ದೆಯೋರ್ವರು ಪೊಳಲಿ ದೇವಳದ ಅನ್ನದಾನಕ್ಕೆ 1ಲಕ್ಷ ರೂಪಾಯಿ ದೇಣಿಗೆಯನ್ನು ಸಮರ್ಪಿಸಿ ಗಮನಸೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೂಡು ನಿವಾಸಿ ಅಶ್ವತ್ತಮ್ಮ ( 80) ಅವರು ಪೊಳಲಿ ದೇವಳಕ್ಕೆ ಬರುವ ಭಕ್ತಾಧಿಗಳ ಅನ್ನದಾನಕ್ಕಾಗಿ 1ಲಕ್ಷ ರೂಪಾಯಿ ದೇಣಿಗೆಯನ್ನು ಶುಕ್ರವಾರ ಸಮರ್ಪಿಸಿ ಸಂತೃಪ್ತರಾಗಿದ್ದಾರೆ.
ವರ್ಷದ ಬಹುತೇಕ ಸಮಯ ಮಾಲಾಧಾರಿಯಾಗಿದ್ದುಕೊಂಡೆ ಅಯ್ಯಪ್ಪ ಸ್ವಾಮಿ ಭಕ್ತೆಯು ಆಗಿರುವ ಅಶ್ವತ್ತಮ್ಮ ಕುಟುಂಬದಲ್ಲಿ ಬಡತನವಿದ್ದರೂ ಇವರಲ್ಲಿ ಧಾರ್ಮಿಕ ಪ್ರಜ್ಞೆ, ಹೃದಯ ಶ್ರೀಮಂತಿಕೆಗೆ ಬರವಿಲ್ಲ.
ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಜಾತ್ರಾ ಸಂದರ್ಭ ಸೇರಿದಂತೆ ಇತರ ಕ್ಷೇತ್ರದಲ್ಲಿ ಬಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಶುಕ್ರವಾರ ಪೊಳಲಿ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ.
ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ದೇವಳದ ಪ್ರಧಾನ ಅರ್ಚಕರಾದ ಮಾಧವ ಭಟ್ ದೇವರಲ್ಲಿ ಪ್ರಾರ್ಥಿಸಿ ಅವರಿಗೆ ಪ್ರಸಾದ ನೀಡಿದರು. ನಾಗೇಶ್ ರಾವ್ , ಪೊಳಲಿ ವೆಂಕಟೇಶ್ ನಾವಡ, ನಾಗೇಶ್ ಪೊಳಲಿ, ನವೀನ್ ಪೊಳಲಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.