ರಾಜ್ಯದಲ್ಲಿ 10 ಮಹಿಳಾ ಪದವಿ ಪೂರ್ವ ಕಾಲೇಜು‌ ನಿರ್ಮಾಣ: ಎನ್.ಕೆ.ಶಫಿ ಸಾಆದಿ

ಹೊಸದಿಗಂತ ವರದಿ, ಕಲಬುರಗಿ:

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ ರಾಜ್ಯದ 10 ಕಡೆ ಮಹಿಳಾ ಪದವಿ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಅಧ್ಯಕ್ಷ ಮೌಲಾನಾ ಎನ್.ಕೆ.ಶಫಿ ಸಾಆದಿ
ಅವರು ತಿಳಿಸಿದರು.

ಭಾನುವಾರ ಇಲ್ಲಿನ ಕೆ.ಬಿ.ಎನ್. ಕಾಲೇಜು ಎದುರುಗಡೆ‌ಯ ಅಂಜುಮ್-ಎ-ತರಖ್ಖಿ ಉರ್ದು ಹಾಲ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಯುವಕ-ಯುವತಿಯರು ಐ.ಎ.ಎಸ್., ಐ.ಪಿ.ಎಸ್ ಸೇರಿದಂತೆ ವಿವಿಧ‌ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆ ಗೆ ಪರೀಕ್ಷಾ ಪೂರ್ವ ತರಬೇತಿ ನೀಡಲು ವಕ್ಫ್ ಮಂಡಳಿಯಿಂದ ಆಧುನಿಕ ತಂತ್ರಜ್ಞಾನವುಳ್ಳ ತರಬೇತಿ ಕೇಂದ್ರವನ್ನು ಬೆಂಗಳೂರಿನಲ್ಲಿ 30 ಸಾವಿರ ಚದುರ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಉದ್ಯಮಿ ಜಿಯಾ ವುಲ್ಲಾ ಶರೀಫ್ ಅವರು ಇದಕ್ಕಾಗಿ 15 ಕೋಟಿ ರೂ ದೇಣಿಗೆ ನೀಡುತ್ತಿದ್ದಾರೆ. ಅಲ್ಲದೇ ತುಮಕೂರಿನ ಹಜರತ್ ಮದಾರ ಶಾ ಮಕಾನ್ ಸಂಸ್ಥೆಯಲ್ಲಿ ಮಹಿಳಾ ಕಾಲೇಜು ಹಾಗೂ ವಸತಿ ನಿಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ 2.5 ಕೋಟಿ ರೂ. ಮಂಜೂರು ಮಾಡಿದೆ ಎಂದರು.

ವಕ್ಫ್ ಮಂಡಳಿ ವತಿಯಿಂದ 6 ಅಂಶಗಳ ಕಾರ್ಯ ಕೈಗೊಂಡಿದ್ದು, ಹೊಸದಾಗಿ ನೋಂದಾಯಿಸಿದ ಆಸ್ತಿಗಳ 2ನೇ ಬಾರಿ ಸರ್ವೆ ಕಾರ್ಯ ಮಾಡಲಾಗುವುದು. ಆಸ್ತಿಗಳ ಸಂರಕ್ಷಣೆಗಾಗಿ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿರಿಯ ವಕೀಲರೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ಒಟ್ಟು ವಕ್ಫ್ ಮಂಡಳಿಗೆ ಅಂದಾಜು 2 ಲಕ್ಷ ಕೋಟಿ ರೂ. ಗಳ ಅಸ್ತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಮಂಡಳಿಯ ಅಧೀನದಲ್ಲಿಲ್ಲ. ಬೇರೆ ಬೇರೆ ಸಂಸ್ಥೆಗಳ ಅಧೀನದಲ್ಲಿದೆ. ಅವುಗಳನ್ನು ಶೀಘ್ರದಲ್ಲಿ ಲೆಕ್ಕ ಪರಿಶೋಧನೆ ಮಾಡಲಾಗುವುದು ಎಂದರು.

ವಕ್ಫ್ ಮಂಡಳಿ ಅಸ್ತಿಗಳಲ್ಲಿ ಕೇವಲ ಮದರಸಾ ಹಾಗೂ ಮಸೀದಿ ಹೆಚ್ಚಿನ ಸಂಖ್ಯೆಯಲ್ಲಿವೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳ ನಿರ್ಮಾಣ ಮೂಲಕ ಶೈಕ್ಷಣಿಕ ಅಭಿವೃದ್ಧಿಪಡಿಸಲಾಗುವುದು. ವಕ್ಫ್ ಸಂಸ್ಥೆಗಳ ಮೂಲ ಅಸ್ತಿಗಳ ದಾಖಲೆಗಳ ಸಂರಕ್ಷಣೆ ಮತ್ತು ಗಣಕೀಕರಣ (ಡಿಜಿಟಲೈಸೇಷನ್), ವಕ್ಫ್ ಅಸ್ತಿಗಳ ಬಾಡಿಗೆ ನಿಯಮಗಳು 2014 ಮತ್ತು ತಿದ್ದುಪಡಿ-2019 ಸಮರ್ಪಕವಾಗಿ ಅನುಷ್ಟಾನಗೊಳಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ ನಿದೇ೯ಶಕ ಸದ್ದಾಮ್ ಹುಸೇನ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಖಾಜಾ ಹುಸೇನ್ ಅತನೂರ್, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಹಜರತ್ ಅಲಿ ನದಾಫ್, ಸೈಯದ್ ಖಾದ್ರಿ ಸಾಬ್ ಸೇರಿದಂತೆ ಅನೇಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!