ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ಮೊದಲ ದಿನವೇ ಜಮ್ಮು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರ ಪರಿಣಾಮ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿಯಿಂದಲೇ ದೇವಾಲಯಕ್ಕೆ ಜನಸಾಗರ ಹರಿದುಬರುತ್ತಿತ್ತು. ಮಧ್ಯರಾತ್ರಿ 2:45ರ ಸುಮಾರಿಗೆ ಮಾತಾ ವೈಷ್ಣೋದೇವಿ ಭವನದಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಈ ದುರಂತ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಕಾಲ್ತುಳಿತಕ್ಕೆ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 12 ಜನ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಮಾತಾ ವೈಷ್ಣೋದೇವಿ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಮ್ಮು ಕಾಶ್ಮೀರ ಸರ್ಕಾರ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ. ಜತೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಘೋಷಣೆ ಮಾಡಲಾಗಿದೆ.
ಗಾಯಾಳುಗಳಿಗೆ ಜಮ್ಮು ಸರ್ಕಾರ 2 ಲಕ್ಷ ರೂ. ಮತ್ತು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ.