June 13, 2026
Saturday, June 13, 2026
spot_img

12 ವರ್ಷಗಳ ಆಡಳಿತ; ವಿಶ್ವದ 4ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ: ಜಗದೀಶ್ ಶೆಟ್ಟರ್

ಹೊಸದಿಗಂತ ವರದಿ ಬೆಳಗಾವಿ:

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕಳೆದ 12 ವರ್ಷದ ಆಡಳಿತದಿಂದ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆತಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಮೂಲಸೌಕರ್ಯ, ರಕ್ಷಣಾ ಕ್ಷೇತ್ರ, ವಿಮಾನಯಾನ ಹಾಗೂ ರೈಲ್ವೆ ಸೇವೆಗಳಲ್ಲಿ ಗಮನಾರ್ಹ ಪ್ರಗತಿ ಸಾಧನೆಯಾಗಿದೆ ಎಂದು ತಿಳಿಸಿದರು.

ನೀತಿ ಆಯೋಗದ ಸಭೆ ಕುರಿತು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಾವಧಿಯಲ್ಲಿ, ರಾಜ್ಯದ ಪರವಾಗಿ ಸಮರ್ಪಕವಾಗಿ ಧ್ವನಿ ಎತ್ತಲಾಗಲಿಲ್ಲ ಎಂದು ಟೀಕಿಸಿದರು. ಆದರೆ ಇತ್ತೀಚೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಡಿಕೆ ಶಿವಕೂಮಾರ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಭಾಗವಹಿಸಿದ್ದಾರೆ ಎಂದು ಹೇಳಿದರು.

ಮೋದಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವೇಗವಾಗಿ ಪೂರ್ಣಗೊಂಡಿದ್ದು, ಸಂಚಾರ ವ್ಯವಸ್ಥೆ ಸುಧಾರಣೆಯಾಗಿದೆ. ಉಡಾನ್ ಯೋಜನೆಯಿಂದ ದೇಶದ ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡುಬಂದಿದ್ದು, 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ವಂದೇ ಭಾರತ ರೈಲು ಹಾಗೂ ಮೆಟ್ರೋ ಸೇವೆಗಳ ವಿಸ್ತರಣೆಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ. ಬೆಳಗಾವಿಯಲ್ಲಿ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ಕೈಗಾರಿಕಾ ಕಾರಿಡಾರ್ಗಳ ನಿರ್ಮಾಣಕ್ಕೂ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ ಎಂದರು.

ಕರ್ನಾಟಕದ ಏಳು ಮಹಾನಗರ ಪಾಲಿಕೆಗಳ ಪೈಕಿ ಬೆಳಗಾವಿಗೆ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ₹135 ಕೋಟಿ ಅನುದಾನ ಮಂಜೂರಾಗಿದೆ. 15ನೇ ಹಣಕಾಸು ಆಯೋಗದಡಿ ₹18 ಕೋಟಿ ಹಾಗೂ 16ನೇ ಹಣಕಾಸು ಆಯೋಗದಡಿ ₹34 ಕೋಟಿ ಅನುದಾನ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಅಲಾರವಾಡದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಹಾಗೂ ಗೇಲ್ ಗ್ಯಾಸ್ ಯೋಜನೆಗೆ ಭೂಮಿ ಒದಗಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು.

“ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗ ಭಾರತ ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು. ಇಂದು ನಾಲ್ಕನೇ ಸ್ಥಾನಕ್ಕೇರಿದ್ದು, ಅವರ ಬಲಿಷ್ಠ ನಾಯಕತ್ವ ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಕಾರಣವಾಗಿದೆ” ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.

ಈ ವೇಳೆ ಮಾಜಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮುರುಘೇಂದ್ರಗೌಡ ಪಾಟೀಲ, ಶಾಸಕ ವಿಠಲ್ ಹಲಗೇಕರ್, ಮಾಜಿ ಶಾಸಕ ಸಂಜಯ್ ಪಾಟೀಲ, ಮಾಜಿ ಶಾಸಕ ಅರವಿಂದ್ ಪಾಟೀಲ, ಮಾಜಿ ಸಂಸದೆ ಮಂಗಲಾ ಅಂಗಡಿ, ನ್ಯಾಯವಾದಿ ಎಂ.ಬಿ. ಝರಳಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !