ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ನಿಲುವು ಇಂಡಿಯಾ ಮೈತ್ರಿಕೂಟ ಬಲಪಡಿಸುವ ಬದಲು ಬಿಜೆಪಿಗೆ ನೆರವಾಗುವ ರೀತಿಯಲ್ಲಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ರಾಹುಲ್ ಗಾಂಧಿ ತಮ್ಮನ್ನು ರಾಜಕೀಯ ಭಿನ್ನಾಭಿಪ್ರಾಯದ ಕಾರಣದಿಂದ ಅಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರೆಂಬ ವರದಿಗೆ ಪ್ರತಿಕ್ರಿಯೆ ನೀಡಿದರು.
ಯಾರು ಯಾರನ್ನು ಅಪ್ಪಿಕೊಳ್ಳುತ್ತಾರೆ ಎಂಬುದು ಮುಖ್ಯವಲ್ಲ. ಆದರೆ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಅಪ್ಪಿಕೊಂಡಿರುವ ಚಿತ್ರವನ್ನು ಎಲ್ಲರೂ ನೋಡಿದ್ದೇವೆ. ನನ್ನ ಆಕ್ಷೇಪ ಅಪ್ಪಿಕೊಳ್ಳುವ ವಿಚಾರಕ್ಕೆ ಅಲ್ಲ, ಅದರ ಹಿಂದಿರುವ ರಾಜಕೀಯ ಸಂದೇಶಕ್ಕೆ. ಅದು ರಾಹುಲ್ ಗಾಂಧಿ ಇಂಡಿಯಾ ಮೈತ್ರಿಕೂಟವನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ:
ಇಂಡಿಯಾ ಮೈತ್ರಿಕೂಟದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್‌ನ ನಿಲುವು, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಧೋರಣೆಯೇ ಕಾರಣವಾಗಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು.
ಇದು ನಮ್ಮ ಅಭಿಪ್ರಾಯ ಮಾತ್ರವಲ್ಲ. ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಕೂಡ ಸಭೆಯಲ್ಲಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಈ ವಿಚಾರದ ಬಗ್ಗೆ ಇನ್ನಷ್ಟು ವಿವರವಾಗಿ ಚರ್ಚಿಸುವ ಅಗತ್ಯವಿದೆ ಎಂದು ತಿಳಿಸಿದ ಪಿಣರಾಯಿ ವಿಜಯನ್, ಸದ್ಯಕ್ಕೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.



