ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಮೇ 25ರ ಸೋಮವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌದಿ ಮುರ್ಮು ಅವರು ಪ್ರದಾನ ಮಾಡಲಿದ್ದಾರೆ.
ಈ ಬಾರಿ ಕರ್ನಾಟಕದಿಂದ 8 ಸಾಧಕರು ಸೇರಿ 131 ಮಂದಿ 2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ . ಈ ವರ್ಷ ಒಟ್ಟು 5 ಮಂದಿಗೆ ಪದ್ಮವಿಭೂಷಣ, 13 ಮಂದಿಗೆ ಪದ್ಮಭೂಷಣ, 113 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಕರ್ನಾಟಕದಿಂದ 8 ಸಾಧಕರು
ಕರ್ನಾಟಕದಿಂದ ಪುಸ್ತಕ ಪ್ರೇಮಿ ಮಂಡ್ಯದ ಅಂಕೇಗೌಡ (ಸಮಾಜ ಸೇವೆ), ಅಲರ್ಜಿ ತಜ್ಞೆ ಡಾ.ಶುಭ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ), ಟಿಟಿ ಜಗನ್ನಾಥನ್ (ಕೈಗಾರಿಕೆ), ಪ್ರಭಾಕರ ಕೋರೆ (ಶಿಕ್ಷಣ), ಎಸ್‌ಜಿ ಸುಶೀಲಮ್ಮ(ಸಮಾಜ ಸೇವೆ), ಶಶಿ ಶೇಖರ್ ವೆಂಪತಿ (ಶಿಕ್ಷಣ), ಸುರೇಶ್ ಹನಗವಾಡಿ (ವೈದ್ಯಕೀಯ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಶತಾವಧಾನಿ ಆರ್. ಗಣೇಶ್ (ಕಲೆ ವಿಭಾಗ) ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.
ನಟ ಮಮ್ಮುಟ್ಟಿ, ಗಾಯಕಿ ಅಲ್ಕಾ ಯಾಗ್ನಿಕ್ ಗೆ ಪ್ರಶಸ್ತಿ
ಮಲಯಾಳಂ ನಟ ಮಮ್ಮುಟ್ಟಿ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ (ಮರಣೋತ್ತರ), ಗಾಯಕಿ ಅಲ್ಕಾ ಯಾಗ್ನಿಕ್, ಮಾಜಿ ಟೆನಿಸ್ ಆಟಗಾರ ವಿಜಯ್ ಅಮೃತರಾಜ್, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿ, ಕ್ರಿಕೆಟಿಗ ರೋಹಿತ್ ಶರ್ಮ ಸೇರಿದಂತೆ ಹಲವಾರು ಪದ್ಮ ಪ್ರಶಸ್ತಿ ಪಡೆಯಲಿದ್ದಾರೆ.



