156 ಕೋವಿಡ್ ಉಚಿತ ಲಸಿಕೆ ಕೇಂದ್ರ ಸರ್ಕಾರದ ಸಾಧನೆ: ಪರಿಷತ್ ಸದಸ್ಯ ಕೆ.ಎಸ್.ನವೀನ್

ಹೊಸದಿಗಂತ ವರದಿ, ಚಿತ್ರದುರ್ಗ:

ಕಳೆದ ಒಂದು ವರ್ಷದ ಅವಧಿಯಲ್ಲಿ ಕೋವಿಡ್ ವಿರುದ್ಧ ೧೫೬ ಕೋಟಿ ಉಚಿತ ಲಸಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಾಧನೆ ಮಾಡಿರುವುದು ಅಭಿನಂದನೀಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವ್ಯಾಪಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಸಂದರ್ಭದಲ್ಲಿ ಭಾರತದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸಾವು ನೋವು ಸಂಭವಿಸುತ್ತದೆ ಎಂದು ಅನುಮಾನಿಸಿದ್ದರು. ಆದರೆ ವಿಶ್ವದ ಇತರೆ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯ ಜನರಿಗೆ ಮೊದಲ ಮತ್ತು ಎರಡನೇ ಸುತ್ತಿನ ಲಸಿಕೆ ನೀಡುವ ಮೂಲಕ ಭಾರತ ಕೊರೋನಾ ನಿಯಂತ್ರಣದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದರು.
ರಾಜ್ಯದಲ್ಲಿ ೯ ಕೋಟಿಗೂ ಹೆಚ್ಚು, ಜಿಲ್ಲೆಯಲ್ಲಿ ೧೦,೫೩,೧೯೩ ಲಸಿಕೆ ನೀಡಲಾಗಿದೆ. ಅಲ್ಲದೇ ೬೦ ವರ್ಷ ಮೀರಿದಹಿರಿಯ ನಾಗರೀಕರು ಹಾಗೂ ಮುಂಚೂಣಿ ಕೊರೋನಾ ವಾರಿಯರ‍್ಸ್‌ಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಮೊದಲ ಹಂತದ ಕೋವಿಡ್ ಸೋಂಕಿನ ಸಂದರ್ಭದಲ್ಲಿ ಲಸಿಕಾ ತಯಾರಿಕಾ ತಜ್ಞರಿಗೆ ವಿಶೇಷ ಆರ್ಥಿಕ ನೆರವು ನೀಡುವ ಮೂಲಕ ಸ್ವದೇಶಿ ಲಸಿಕೆ ಕಂಡುಹಿಡಿಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಕೋವಿಡ್ ಲಸಿಕೆ ಕುರಿತು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಮೂರನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಆರೋಗ್ಯ ಕಾರ್ಯಕರ್ತರು ನಗರ ಹಾಗೂ ಗ್ರಾಮೀಣ ಭಾಗಗಳಲ್ಲೂ ಮನೆ ಮನೆಗೆ ತೆರಳಿ ಲಸಿಕೆ ನೀಡಿರುವುದು ಇದಕ್ಕೆ ಕಾರಣ. ಆದಾಗ್ಯೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ಶೇಕಡಾ ೭೬ ರಷ್ಟು ಜನರು ಮಾತ್ರ ಎರಡನೇ ಸುತ್ತಿನ ಲಸಿಕೆ ಪಡೆದಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಶೀಘ್ರ ನಿಗದಿತ ಗುರಿ ಸಾಧಿಸುವ ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಪತ್‌ಕುಮಾರ್, ದಗ್ಗೆ ಶಿವಪ್ರಕಾಶ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!