ಕೇಂದ್ರದ ಗತಿಶಕ್ತಿಗೆ ಪೂರಕವಾಗಿ ರಾಜ್ಯದ ಮಾಸ್ಟರ್ ಪ್ಲ್ಯಾನ್ ವಿವರಿಸಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇಂದು ನಡೆದ ಪಿಎಂ ಗತಿ ಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಸರಕಾರದ ಮುಂದಿರುವ ಮಾಸ್ಟರ್ ಪ್ಲ್ಯಾನ್ ಪ್ರಸ್ತಾಪಿಸಿದ್ದಾರೆ.

ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ತೀವ್ರಗತಿಯಲ್ಲಿ ಅನುಮೋದನೆ ಹಾಗೂ ಚಾಲನೆ ಕೊಡಲು ಮತ್ತು ಎಲ್ಲ ರೀತಿಯ ನೆರವನ್ನು ನೀಡುವಂತೆ ಸಿಎಂ ಕೋರಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಈ ಗತಿಶಕ್ತಿಯ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದೂ ಹೇಳಿದ್ದಾರೆ.

ರಾಜ್ಯದ ಮಾಸ್ಟರ್ ಪ್ಲ್ಯಾನ್ ಏನು?

* ಕರ್ನಾಟಕದ ಅಭಿವೃದ್ಧಿಯಲ್ಲಿ ರಸ್ತೆ, ರೈಲು ಸಂಪರ್ಕ, ವಿಮಾನ ನಿಲ್ದಾಣ ಮತ್ತು ಬಂದರು ಮುಂತಾದ ಮೂಲಭೂತ ಸೌಕರ್ಯಗಳು ಪ್ರಮುಖ ಪಾತ್ರವಹಿಸುತ್ತದೆ.

* ಬೆಂಗಳೂರು ಉಪನಗರ ಹಾಗೂ ತುಮಕೂರು ಚಿತ್ರದುರ್ಗ ದಾವಣಗೆರೆ ರೈಲ್ವೆ ಸಂಪರ್ಕಕ್ಕಾಗಿ ಕೇರೈಡ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.

* ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್, ಬೆಂಗಳೂರು – ಮುಂಬೈ ನಡುವೆ ಮೆಗಾ ಮೂಲ ಸೌಕರ್ಯ ಕೈಗಾರಿಕೆ ಕಾರಿಡಾರ್ ಯೋಜನೆಗಳನ್ನು ಸ್ಥಾಪಿಸಲು 11 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

* ರಾಜ್ಯದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್, ಕೃಷಿ -ತೋಟಗಾರಿಕೆ ಕ್ಲಸ್ಟರ್ ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಹಲವು ಯೋಜನೆಗಳ ಜಾರಿಗೆ ಕ್ರಮವಹಿಸಲಾಗಿದೆ.

* 2274 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 3611 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

* ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ 1100 ಕಿ.ಮೀ. ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ.

* ದಕ್ಷಿಣ ಭಾರತದ ಮೆಟ್ರೋ ನಗರಗಳ ನಡುವೆ ಹೈ ಸ್ಪೀಡ್ ರೈಲು ಲೈನ್ ನಿರ್ಮಾಣಕ್ಕೆ ಇಂಡಿಯನ್ ರೈಲ್ವೆ ಉದ್ದೇಶಿಸಿದೆ.

* ಉಡಾನ್ ಯೋಜನೆಯಡಿ ಶಿವಮೊಗ್ಗ, ಬಳ್ಳಾರಿ, ವಿಜಯಪುರ, ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.

* ಹೆಲಿ ಟೂರಿಸಂಗಾಗಿ ಚಿಕ್ಕಮಗಳೂರು, ಮಡಿಕೇರಿ, ಹಂಪಿಯಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

* ಪಿಪಿಪಿ ಮಾದರಿಯಲ್ಲಿ ಬೆಲೆಕೆರೆಯಲ್ಲಿ ಎರಡು ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ಕ್ರಮ.

* ಸಾಗರಮಾಲಾ ಯೋಜನೆಯಡಿ ಮಾವಿನಕುರ್ವೆ, ಕಾರವಾರ ಮತ್ತು ಹಳೆ ಮಂಗಳೂರು ಪೋರ್ಟ್‌ಗಳ ಆಧುನಿಕರಣ ಯೋಜನೆ ಸಿದ್ಧ ಗೊಂಡಿದೆ.

* ರಾಜ್ಯದ 28 ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ಯಾಸ್ ಗ್ರಿಡ್ ಯೋಜನೆಯಡಿ 1204 ಕಿ.ಮೀ. ಗ್ಯಾಸ್ ಪೈಪ್ ಲೈನ್ ಅಳವಡಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!