16.17 ಲಕ್ಷ ಮೌಲ್ಯದ ಮಾದಕ ವಸ್ತು ವಿಲೇವಾರಿ ಮಾಡಿದ ಉ.ಕ. ಜಿಲ್ಲಾ ಪೋಲೀಸ್‌

ಹೊಸದಿಗಂತ ವರದಿ, ಅಂಕೋಲಾ :
ಅಂತರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ ಸುಮಾರು 16.17 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಅಂಕೋಲಾ ಬೊಗ್ರಿಬೈಲ್ ಸಮೀಪದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಅವರ ಸಮ್ಮುಖದಲ್ಲಿ ನಡೆಸಲಾದ ವಿಲೇವಾರಿ ಕಾರ್ಯಾಚರಣೆಯಲ್ಲಿ 64 ಪ್ರಕರಣಗಳಲ್ಲಿ ವಶಪಡಿಸಿಕೊಂಡ 15.22 ಲಕ್ಷ ಮೌಲ್ಯದ 75 ಕೆ.ಜಿ ಗಾಂಜಾ.
ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ 80 ಸಾವಿರ ರೂಪಾಯಿ ಮೌಲ್ಯದ 195 ಗ್ರಾಂ ಚರಸ್, ನಾಲ್ಕು ಪ್ರಕರಣಗಳಲ್ಲಿ ವಶ ಪಡಿಸಿಕೊಳ್ಳಲಾಗಿದ್ದ 15800 ರೂಪಾಯಿ ಮೌಲ್ಯದ 61 ಗಾಂಜಾ ಗಿಡಗಳನ್ನು ವಿಲೇವಾರಿ ಘಟಕದಲ್ಲಿ ನಾಶ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟದ ಕುರಿತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆಗೆ ಸೂಚಿಸಲಾಗಿದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ 12 ತಾಲೂಕುಗಳಲ್ಲಿ 69 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಮಾದಕ ವಸ್ತುಗಳ ಮಾರಾಟ, ಸಾಗಾಟ, ಸೇವನೆ ಕಾನೂನಿನ ಪ್ರಕಾರ ಅಪರಾಧವಾಗಿದ್ದು ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡವರ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.
ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ, ಡಿ.ಸಿ.ಆರ್. ಬಿ ಡಿ.ವೈ.ಎಸ್. ಪಿ ಅರವಿಂದ ಕಲಗುಜ್ಜಿ,ಅಂಕೋಲಾ ಸಿ.ಪಿ.ಐ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರವಿಣಕುಮಾರ್, ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಮೇಸ್ತ, ಕಂದಾಯ ಇಲಾಖೆಯ ಪ್ರಜ್ಞೇಶ, ರಾಘವೇಂದ್ರ ಜನ್ನು, ಪೊಲೀಸ್ ಸಿಬ್ಬಂದಿಗಳು, ಘನ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!