ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದ ಸಂಘರ್ಷ: ಸಿರಿಯಾ ಮೇಲಿನ ಟರ್ಕಿ ವೈಮಾನಿಕ ದಾಳಿಗೆ 17 ಜನರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಸಿರಿಯಾ ಗಡಿ ಪೋಸ್ಟ್‌ಗಳ ಮೇಲೆ ಟರ್ಕಿ ನಡೆಸಿದ ವಾಯುದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ.
ಟರ್ಕಿಯ ವೈಮಾನಿಕ ದಾಳಿಯಲ್ಲಿ ಹನ್ನೊಂದು ಹೋರಾಟಗಾರರು ಕೊಲ್ಲಲ್ಪಟ್ಟರು. ಟರ್ಕಿ ಗಡಿಗೆ ಸಮೀಪದಲ್ಲಿ ಈ ದಾಳಿ ನಡೆದಿದೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯವು ಹೇಳಿದೆ. ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಹಾಗೂ ಟರ್ಕಿಯ ಪಡೆಗಳ ನಡುವಿನ ಘರ್ಷಣೆಯ ಸ್ಥಳವಾದ ಕುರ್ದಿಶ್ ಹಿಡಿತದಲ್ಲಿರುವ ಕೊಬಾನ್ ಪಟ್ಟಣದ ಬಳಿ ದಾಳಿಗಳು ನಡೆದಿವೆ. ಟರ್ಕಿಯ ದಾಳಿಯಲ್ಲಿ ಕನಿಷ್ಠ ಮೂವರು ಸಿರಿಯನ್ ಸೈನಿಕರು ಮೃತಪಟ್ಟು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲವನ್ನು ಉಲ್ಲೇಖಿಸಿ ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ.
“ನಮ್ಮ ಸಶಸ್ತ್ರ ಪಡೆಗಳ ಮೇಲಿನ ಯಾವುದೇ ಮಿಲಿಟರಿ ದಾಳಿಗೆ ಎಲ್ಲಾ ರೀತಿಯಲ್ಲಿ ನೇರ ಮತ್ತು ತಕ್ಷಣದ ಪ್ರತಿಕ್ರಿಯೆ ನೀಡಲಾಗುವುದು” ಎಂದು ಸಿರಿಯಾ ಸುದ್ದಿಸಂಸ್ಥೆ ಎಚ್ಚರಿಕೆ ರವಾನಿಸಿದೆ. ಕುರ್ದಿಷ್ ಪಡೆಗಳು ಪ್ರತಿಕಾರವಾಗಿ ರಾತ್ರಿಯಿಡೀ ಟರ್ಕಿಯ ಪ್ರದೇಶದೊಳಗೆ ದಾಳಿ ಮಾಡಿ ಒಬ್ಬ ಸೈನಿಕನನ್ನು ಕೊಂದಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.
ಜುಲೈ 19 ರಂದು ಇರಾನ್ ಮತ್ತು ರಷ್ಯಾ ಜೊತೆಗಿನ ಶೃಂಗಸಭೆಯಲ್ಲಿ ಕುರ್ದಿಶ್ ಹೋರಾಟಗಾರನ್ನು ಭಯೋತ್ಪಾದಕರೆಂದು ಘೋಷಿಸಿದ ಬಳಿಕ ಟರ್ಕಿಯು ಸಿರಿಯಾದ ಕುರ್ದಿಶ್ ನಿಯಂತ್ರಿತ ಪ್ರದೇಶಗಳಲ್ಲಿ ತನ್ನ ದಾಳಿಯನ್ನು ಹೆಚ್ಚಿಸಿದೆ. ಮಂಗಳವಾರ ಟರ್ಕಿಯ ಡ್ರೋನ್ ದಾಳಿಯಲ್ಲಿ ಕುರ್ದಿಶ್ ನಿಯಂತ್ರಿತ ಪ್ರದೇಶವಾದ ಹಸಾಕೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದರು.
ಟರ್ಕಿಯು ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ರ ಪದಚ್ಯುತಿಗೆ ಯತ್ನಿಸುತ್ತಿದೆ. ಇದಕ್ಕಾಗಿ  ಬಂಡುಕೋರರಿಗೆ ನೆರವಾಗುತ್ತಿದೆ. ಟರ್ಕಿಯ ದಾಳಿಗಳನ್ನು ತಡೆಗಟ್ಟುವ ಉದ್ದೇಶದಿಂದ ಸಿರಿಯಾ ಸರ್ಕಾರ ಕುರ್ದೀಶ್‌ ಹೋರಾಟಗಾರರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಟರ್ಕಿ ಗಡಿಯ ಸಮೀಪವಿರುವ ಕುರ್ದಿಶ್ ಹೋರಾಟಗಾರರ ನಿಯಂತ್ರಣದ ಪ್ರದೇಶಗಳಲ್ಲಿ ಸಿರಿಯನ್ ಆಡಳಿತ ಪಡೆಗಳನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!