ಹೊಸದಿಗಂತ ಡಿಜಿಟಲ್ ಡೆಸ್ಕ್ :
ಓದುವ ಮಕ್ಕಳ ವಿವಿಧ ರೀತಿಯ ಆವಿಷ್ಕಾರಗಳ ಬಗ್ಗೆ ನಾವೆಲ್ಲಾ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಬಾಲಕ ದೈನಂದಿನ ಬದುಕಿನ ಅವಶ್ಯಕತೆಗಳ ಪೂರೈಕೆಗಾಗಿ ಏಕಾಂಗಿಯಾಗಿ ಅಸಾಮಾನ್ಯ ಸಾಧನೆ ಮಾಡಿದ್ದಾನೆ. ಅದಕ್ಕೆ ಪ್ರತ್ಯುತ್ತರವಾಗಿ ಗಂಗೆಯು ಆಶೀರ್ವದಿಸಿದ್ದಾಳೆ.
ಪಂಚಾಯತ್‌ನಿಂದ ಅಳವಡಿಸಿರುವ ನಲ್ಲಿಯಲ್ಲಿ ಸಮರ್ಪಕವಾಗಿ ನೀರು ಬರುವುದಿಲ್ಲ ಎಂಬ ಕಾರಣಕ್ಕೆ, ಅದನ್ನು ಸವಾಲಾಗಿ ಸ್ವೀಕರಿಸಿದ ವಿದ್ಯಾರ್ಥಿಯೊಬ್ಬ ಏಕಾಂಗಿಯಾಗಿ ಭಗೀರಥ ಪ್ರಯತ್ನ ಮಾಡಿ ಬಾವಿಯೊಂದನ್ನು ಕೊರೆದಿದ್ದಾನೆ. ಅದರಲ್ಲಿ ನೀರು ಬಂದಿದ್ದು, ಇದೀಗ ಮನೆ ಮಂದಿಯ ಜೊತೆಗೆ ಊರಿನ ನಾಗರಿಕರ ಪ್ರಸಂಸೆಗೂ ಪಾತ್ರನಾಗಿದ್ದಾನೆ.
ಬಂಟ್ವಾಳದ ನರಿಕೊಂಬು ಗ್ರಾಮದ ನಾಯಿಲ-ಕಾಪಿಕ್ಕಾಡ್ ನಿವಾಸಿ ಲೋಕನಾಥ- ಮೋಹಿನಿ ದಂಪತಿಯ ಪುತ್ರ, ಪಿಯುಸಿ ವಿದ್ಯಾರ್ಥಿ ಸೃಜನ್ ಬಾವಿ ಕೊರೆದ ವಿದ್ಯಾರ್ಥಿ. ಯಾರೊಬ್ಬರ ಸಹಾಯವನ್ನೂ ಪಡೆಯದೆ ಆಳವಾದ ಮಣ್ಣನ್ನು ತಾನೊಬ್ಬನೇ ತೆಗೆದಿದ್ದು, ಸುಮಾರು 30 ಅಡಿ ಆಳದಲ್ಲಿ ಈ ಬಿರು ಬೇಸಗೆಯಲ್ಲೂ 3 ಅಡಿಯಷ್ಟು ನೀರು ಬಂದಿದೆ.
ಬಿ.ಮೂಡ ಸರಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸೃಜನ್ ದ್ವಿತೀಯ ಪಿಯುಗೆ ತೇರ್ಗಡೆ ಹೊಂದಿದ್ದಾರೆ. ಮನೆಯಲ್ಲಿ ಸದಾ ಕುಡಿಯುವ ನೀರಿಗೆ ಕಷ್ಟಪಡುವ ಪರಿಸ್ಥಿತಿ. ಅದರಿಂದ ಬೇಸತ್ತಿದ್ದ ಸೃಜನ್, ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಬಹಳ ದಿನಗಳಿಂದ ಚಿಂತನೆ ನಡೆಸಿದ್ದ. ಕಾಲೇಜು ಕಲಿಕೆಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದ್ದ. ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ಹೊಂಡವನ್ನು ತೋಡಲು ಆರಂಭಿಸಿದ್ದಾನೆ. ಹೀಗೆ ಆಳವಾಗುತ್ತ ಹೋಗಿ ಸುಮಾರು 25 ಅಡಿ ಆಳದಲ್ಲಿ ನೀರು ಲಭಿಸಿದ್ದು, ಬಾವಿಯಲ್ಲಿ ಬಹಳಷ್ಟು ನೀರು ತುಂಬಿಕೊಂಡಿದೆ.
ಬಾವಿಯ ನೀರನ್ನು ಕಂಡು ಮನೆ ಮಂದಿಯ ಸಂತೋಷಕ್ಕೆ ಪಾರವೇ ಇಲ್ಲದಾಗಿದ್ದು, ಮಗನ ಸಾಧನೆ ಯನ್ನು ಮೆಚ್ಚಿ ಆನಂದ ಬಾಷ್ಪ ಹಾಕುತ್ತಿದ್ದಾರೆ. ಊರ ಮಂದಿಯೂ ಸೃಜನ್ ಸಾಹಸಕ್ಕೆ ಬೆನ್ನು ತಟ್ಟಿದ್ದಾರೆ.