ಹೈದರಾಬಾದ್‌ ಪಶುವೈದ್ಯೆ ಅತ್ಯಾಚಾರ ಪ್ರಕರಣ: ಆರೋಪಿಗಳ ಎನ್‌ ಕೌಂಟರ್‌ ನಕಲಿ ಎಂದ ಸುಪ್ರೀಂ ಸಮಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೈದರಾಬಾದ್‌ ನಲ್ಲಿ ಪಶುವೈದ್ಯೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಂದುಹಾಕಿದ್ದ ಆರೋಪಿಗಳ ಹತ್ಯೆಗೆ ಪೊಲೀಸರು ನಡೆಸಿದ ಎನ್‌ಕೌಂಟರ್ ನಕಲಿ ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಸಮಿತಿ ಶುಕ್ರವಾರ ಅಭಿಪ್ರಾಯಪಟ್ಟಿದೆ. ಹಾಗೂ ನಾಲ್ವರು ಆರೋಪಿಗಳನ್ನು ಕೊಂದಿದ್ದಕ್ಕಾಗಿ 10 ಪೊಲೀಸ್ ಅಧಿಕಾರಿಗಳನ್ನು ಕೊಲೆ ಆರೋಪದಡಿ ವಿಚಾರಣೆಗೆ ಒಳಪಡಿಸುವಂತೆ ಶಿಫಾರಸು ಮಾಡಿದೆ.
2019 ರಲ್ಲಿ ಶಂಶಾಬಾದ್‌ನ ತೊಂಡುಪಲ್ಲಿಯಲ್ಲಿನ ಟೋಲ್ ಪ್ಲಾಜಾ ಬಳಿ 27 ವರ್ಷದ ಪಶುವೈದ್ಯೆಯನ್ನು ಅಪಹರಿಸಿದ್ದ ನಾಲ್ವರು ದುರುಳರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಕೊಂದು ಹೈದರಾಬಾದ್‌ನ ಹೊರವಲಯದಲ್ಲಿರುವ ಶಾದ್‌ನಗರ ಬಳಿಯ ಚಟನ್‌ಪಲ್ಲಿಯಲ್ಲಿ ದೇಹವನ್ನು ಸುಟ್ಟು ಹಾಕಿದ್ದರು. ಈ ಘಟನೆಯ ಬಗ್ಗೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಆರೋಪಿಗಳಾದ ಮೊಹಮ್ಮದ್ ಆರಿಫ್, ಚಿಂತಕುಂಟಾ ಚೆನ್ನಕೇಶವುಲು, ಜೋಲು ಶಿವ ಮತ್ತು ಜೊಲ್ಲು ನವೀನ್‌ ನನ್ನು ಸೆರೆಹಿಡಿದಿದ್ದರು. ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಾಗ ಅವರು ಪಿಸ್ತೂಲ್ ಕಿತ್ತುಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್‌ಕೌಂಟರ್‌ನಲ್ಲಿ ಗುಂಡಿಟ್ಟು ಕೊಲ್ಲಲಾಯ್ತು ಎಂದು ಪೊಲೀಸರು ತಿಳಿಸಿದ್ದರು.
ಪ್ರಕರಣದ ವಿಚಾರಣೆಗೆ ನ್ಯಾಯಮೂರ್ತಿ ಸಿರ್ಪುರ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ʼಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ ಎಂಬ ಪೊಲೀಸರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ, ಆ ಬಗ್ಗೆ ಪೊಲೀಸರು ನೀಡಿದ ಸಾಕ್ಷ್ಯಾಧಾರಗಳಿಂದಲೂ ಸಾಬೀತಾಗಿಲ್ಲ ಎಂದು ಸಮಿತಿ ಹೇಳಿದೆ.ʼ
ʼಆರೋಪಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಸಮಿತಿಯ ವರದಿ ಹೇಳಿದೆ. ಆಯೋಗವು ತನ್ನ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!