ಎತ್ತಸಾಗುತ್ತಿದೆ ಮಹಾರಾಷ್ಟ್ರ? ಅಜಾನ್‌ ಮೊಳಗುವ ವೇಳೆ ಸಂಗೀತ ಹಾಕಿದ್ದಕ್ಕೆ ರೈಲ್ವೇ ಪೊಲೀಸ್‌ ಮೇಲೆ ಪ್ರಕರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾರಾಷ್ಟ್ರದಲ್ಲಿ ಅಜಾನ್‌ ಹಾಗೂ ಹನುಮಾನ್‌ ಚಾಲೀಸಾ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಹಾರಾಷ್ಟ್ರದ ಶಿವಸೇನೆ ಸರ್ಕಾರದ ಹಿಂದೂ ತುಷ್ಟೀಕರಣ ನೀತಿಗಳ ವಿರುದ್ಧ ಬಿಜೆಪಿ ಹಾಗೂ ಎಂಎನ್‌ಎಸ್‌ ಸಂಘರ್ಷ ನಡೆಸುತ್ತಿವೆ. ಇವೆಲ್ಲವುಗಳ ನಡುವೆ ಮಸೀದಿಯೊಂದರ ಅಜಾನ್ ಕೂಗುವ ವೇಳೆ ಸಮೀಪದ ಸ್ಥಳದಲ್ಲಿ ಜೋರಾಗಿ ಹಾಡು ಹಾಕಿದ್ದಾರೆ ಎಂಬ ಕಾರಣಕ್ಕೆ ರೈಲ್ವೆ ಅಧಿಕಾರಿಯೊಬ್ಬರ ಮೇಲೆ ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಿದ ಪ್ರಕರಣ ದಾಖಲಿಸಲಾಗಿದ್ದು ವಿವಾದವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಔರಂಗಾಬಾದ್‌ ನಲ್ಲಿ ರೈಲ್ವೇ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುವ ಅಮೃತಸಾಯಿ ಪ್ಲಾಜಾ ಸೊಸೈಟಿಯ ನಿವಾಸಿ ಕಿಶೋರ್ ಮಲ್ಕುನಾಯ್ಕ್ ಎಂಬುವವರ ಮನೆ ಮಸೀದಿ ಸಮೀಪವೇ ಇದೆ. ಏ.23ರಂದು ಕಿಶೋರ್ ಪತ್ನಿಯ ಹುಟ್ಟುಹಬ್ಬವಿದ್ದುದರಿಂದ ಕುಟುಂಬಸ್ಥರೆಲ್ಲ ಸೇರಿ ಸಂಭ್ರಮಾಚರಣೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಬ್ಲೂಟೂತ್ ಸ್ಪೀಕರ್‌ನಲ್ಲಿ ಸಂಗೀತ ಹಾಕಿದ್ದಾರೆ. ಅದೇ ಸಂದರ್ಭಕ್ಕೆ ಮನೆಯ ಮುಂಭಾಗದಲ್ಲಿರುವ ಮಸೀದಿಯಲ್ಲಿ ಆಜಾನ್ ಮೊಳಗುತ್ತಿತ್ತು. ಆ ಪ್ರದೇಶದ ʼಕೆಲವುʼ ನಿವಾಸಿಗಳಿಗೆ ಕಿಶೋರ್ ಅವರ ಮನೆಯಿಂದ ಹೊರಡುತ್ತಿದ್ದ ಸಂಗೀತದ ಶಬ್ಧ ಕಿರಿಕಿರಿ ಉಂಟುಮಾಡಿದೆ. ಅಲ್ಲದೇ ಅಜಾನ್‌ ಶಬ್ಧಕ್ಕಿಂತಲೂ ಸಂಗೀತದ ಶಬ್ಧದ ಮಟ್ಟ ಉಚ್ರಾಯವಾಗಿತ್ತು. ಇದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿ ನೆರೆಹೊರೆಯ ನಿವಾಸಿಗಳಾದ ಶೇಖ್ ಶಫೀಕ್, ಶೇಖ್ ಶಬ್ಬೀರ್, ಇಮ್ರಾನ್ ಖಾನ್, ಮುದಸ್ಸಿರ್ ಅನ್ಸಾರಿ ಮತ್ತಿತರರು ಸತಾರಾ ಠಾಣೆಯ ಕಂಟ್ರೋಲ್‌ ರೂಂಗೆ ಕರೆ ಮಾಡಿದ್ದಾರೆ. ಈ ದೂರಿನನ್ವಯ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರ ತಂಡ ಕಿಶೋರ್‌ ಅವರ ಮನೆಯ ಬೆಡ್‌ರೂಮ್‌ ನಲ್ಲಿ ಬ್ಲೂಟೂತ್ ಸ್ಪೀಕರ್ ಇರಿಸಿರುವುದನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದೆ. ನಂತರ ಕಿಶೋರ್ ಮಲ್ಕುನಾಯ್ಕ್ ವಿರುದ್ಧ ಐಪಿಸಿ ಸೆಕ್ಷನ್ 505 (ಬಿ) ಮತ್ತು (ಸಿ) ಅಡಿಯಲ್ಲಿ ಸಮುದಾಯವೊಂದರ ವಿರುದ್ಧ ಹಿಂಸೆಗೆ ಪ್ರಚೋದಿಸಿದ, ದ್ವೇಷ ಹರಡಿದ ಕಾಯ್ದೆ (ಮಹಾರಾಷ್ಟ್ರ ಪೊಲೀಸ್‌ ಆಕ್ಟ್‌, 135) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಂದುವೇಳೆ ಕಿಶೋರ್ ಆರೋಪ ಸಾಬೀತಾದರೆ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮಲ್ಕುನಾಯಕ್ ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ ಅವರು, ಏ.23 ರಂದು ನಾವು ನಮ್ಮ ಮನೆಯೊಳಗೆ ಸಂಭ್ರಮಾಚರಣೆ ಮಾಡುತ್ತಿದ್ದಾಗ ರಾತ್ರಿ 8:30 ರ ಸುಮಾರಿಗೆ ಪೊಲೀಸರು ಇದ್ದಕ್ಕಿದ್ದಂತೆ ಮನೆಯೊಳಕ್ಕೆ ನುಗ್ಗಿ ಪ್ರಶ್ನಿಸಿದರು. ಬ್ಲೂಟೂತ್ ಸ್ಪೀಕರ್ ಎಷ್ಟು ಶಬ್ದ ಮಾಡಬಹುದು ನೀವೇ ಊಹಿಸಿ. ನಮ್ಮನ್ಯಾಕೆ ಪ್ರಶ್ನಿಸುತ್ತಿದ್ದಾರೆಂಬುದು ನಮಗಾಗ ತಿಳಿಯಲೇ ಇಲ್ಲ. ಮರುದಿನ ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ಎಂದು ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.
ನಾವು ಈ ಸಮಾಜದಲ್ಲಿ ಬಹಳ ದಿನಗಳಿಂದ ಬದುಕುತ್ತಿದ್ದೇವೆ. ಅನೇಕ ಮುಸ್ಲಿಮರು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ನಾವು ಯಾವತ್ತಿಗೂ ಪರಸ್ಪರ ಸಮಸ್ಯೆಗಳನ್ನು ಹೊಂದಿರಲಿಲ್ಲ. ಆದರೆ ಎಲ್ಲವೂ ಬದಲಾಗಿದೆ. ಮನೆಯೊಳಗೆ ಸಂಗೀತವನ್ನು ಹಾಕಿದರೂ ವಿವಾದವನ್ನು ಸೃಷ್ಟಿಸಲಾಗುತ್ತದೆ. ಖಂಡಿತ ಇದು ಸ್ವೀಕಾರಾರ್ಹವಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಕಿಶೋರ್ ಮಲ್ಕುನಾಯ್ಕ್ ಆರೋಪಿಸಿದ್ದಾರೆ. ಕುಟುಂಬದೊಂದಿಗೆ ಸಂತಸದಿಂದ ಕಾಲ ಕಳೆಯಲು ಎದುರು ನೋಡುತ್ತಿದ್ದ ಮಲ್ಕುನಾಯ್ಕ್ ದಂಪತಿ ಆ ದಿನ ರಾತ್ರಿ 1 ಗಂಟೆ ವರೆಗೆ ಪೊಲೀಸರ ಸುದೀರ್ಘ ವಿಚಾರಣೆ ಎದುರಿಸಿ ಹೈರಾಣಾಗಬೇಕಾಯ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!