Friday, February 3, 2023

Latest Posts

ಅಕ್ರಮವಾಗಿ ಸಾಗಿಸುತ್ತಿದ್ದ 24 ಗೋವುಗಳ ರಕ್ಷಣೆ: ಆರೋಪಿಗಳು ಪರಾರಿ

ಹೊಸದಿಗಂತ ವರದಿ, ಕೊಡಗು:
ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ತಾಲೂಕಿನ ಸಂಪಾಜೆ ಅರಣ್ಯ ತಪಾಸಣಾ ಗೇಟ್ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದು, ಲಾರಿ ಸಹಿತ 24ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ರಾತ್ರಿ KA05 AA8605 ನೋಂದಣಿ ಸಂಖ್ಯೆಯ ಐಷರ್ ಲಾರಿಯನ್ನು ತಪಾಸಣೆ ಮಾಡುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ವಾಹನದಿಂದ ಜಿಗಿದು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಒಂದಷ್ಟು‌ ದೂರ ಸಿಬ್ಬಂದಿಗಳು ಬೆನ್ನಟ್ಟಿದರಾದರೂ, ದಟ್ಟ ಕತ್ತಲು ಇದ್ದುದರಿಂದ ಆರೋಪಿಗಳು ಕಣ್ಮರೆಯಾಗಿದ್ದಾರೆ.
ಇತ್ತ ಲಾರಿಯಲ್ಲಿ 24ಗೋವುಗಳು ಪತ್ತೆಯಾಗಿದ್ದು, ಲಾರಿ ಸಹಿತ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗವಾಗಿ ಸುಳ್ಯ ಕಡೆಗೆ ತೆರಳುತ್ತಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆ ಸಹ ತಡರಾತ್ರಿ ಮದೆನಾಡು ಬಳಿ ಲಾರಿಯೊಂದು ಅಪಘಾತಕ್ಕೀಡಾದಾಗ ಅದರಲ್ಲಿ 25 ಕ್ಕೂ ಹೆಚ್ಚು ಗೋವುಗಳಿದ್ದು ಆರೋಪಿಗಳು ಕೂಡಲೇ ಗೋವುಗಳನ್ನು ಕೆಳಗಿಳಿಸಿ ತಪ್ಪಿಸಿಕೊಂಡಿದ್ದರೆನ್ನಲಾಗಿದ್ದು, ಸ್ಥಳೀಯರು ಆ ಗೋವುಗಳನ್ನು ಕೊಂಡೊಯ್ದಿದ್ದರು.
ಸಂಪಾಜೆ ಚೆಕ್ ಪೋಸ್ಟ್ ಮೂಲಕ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ ನಿರಂತರವಾಗಿ ಸಿಬ್ಬಂದಿಗಳ ಸಹಕಾರದಿಂದಲೇ ಅಕ್ರಮವಾಗಿ ಗೋಸಾಗಾಟವಾಗುತ್ತಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆ ಹಲವು ಬಾರಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು.
ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!