ಬಾಗಲಕೋಟೆ: ಮಕ್ಕಳಿಗೆ ಕೋವಿಡ್‌ ಲಸಿಕೆ ಅಭಿಯಾನ- 250 ತಂಡಗಳ ರಚನೆ

ಹೊಸದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಲಸಿಕಾಕರಣ ಅಭಿಯಾನಕ್ಕೆ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಚಾಲನೆ ನೀಡಿದರು.
ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಾದ್ಯಂತ ಸೋಮವಾರದಿಂದ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ 15-18 ವರ್ಷದ 1,00,211 ಮಕ್ಕಳಿದ್ದಾರೆ. ಇವರೆಲ್ಲರಿಗೂ ಲಸಿಕೆ ನೀಡಲು ಜಿಲ್ಲೆಯಾದ್ಯಂತ ಒಟ್ಟು 250 ತಂಡಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರೆ ಎಲ್ಲ ಅಧಿಕಾರಿಗಳ ಮುತುವರ್ಜಿಯಿಂದ ಜಿಲ್ಲೆಯಲ್ಲಿ ಕೋವಿಡ್ ಶೂನ್ಯ ಪ್ರಮಾಣದಲ್ಲಿದೆ. ಲಸಿಕೆಯನ್ನು ಸಹ ಶೇ.100 ರಷ್ಟು ಸಾಧನೆ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಮೊದಲನೇ ಡೋಸ್‍ನಲ್ಲಿ ನೂರರಷ್ಟು ಸಾಧನೆಯಾಗಿದ್ದು, ಎರಡನೇ ಡೋಸ್‍ನಲ್ಲಿ ಶೇ.82 ರಷ್ಟು ಸಾಧನೆ ಮಾಡಲಾಗಿದೆ. ಎರಡನೇ ಡೋಸ್‍ನಲ್ಲೂ ಯಶಸ್ವಿಯಾಗಲಿದ್ದೇವೆ ಎಂದರು.
ಜಾಗತಿಕ ಮಟ್ಟದಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿದ ದೇಶ ಭಾರತ ದೇಶವಾಗಿದೆ. ಕೋವಿಡ್ ಮೂರನೇ ಅಲೆ ಮಹಾರಾಷ್ಟ್ರ, ಪಶ್ವಿಮ ಬಂಗಾಲ, ದೆಹಲಿಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜಾಗೃತಿ ವಹಿಸಿದರೆ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪ್ರಸಂಗ ಬರುವದಿಲ್ಲ. ಆದ್ದರಿಂದ ಸಾರ್ವಜನಿಕರು ಸರಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಲು ಚರಂತಿಮಠ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಜಿ.ಪಂ ಸಿಇಓ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದಶಕ ಶಶಿಧರ ಪೂಜಾರ, ಹಿರಿಯ ವೈದ್ಯಾಧಿಕಾರಿ ಡಾ.ಜಯಶ್ರೀ ಎಮ್ಮಿ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಜೇವೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!