ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಚುನಾವಣೆಯು ಜಮ್ಮು-ಕಾಶ್ಮೀರದಲ್ಲಿ 3 ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. ಅಬ್ದುಲ್ಲಾ ಕುಟುಂಬ, ಮುಫ್ತಿ ಕುಟುಂಬ ಮತ್ತು ನೆಹರು-ಗಾಂಧಿ ಕುಟುಂಬದ ಆಡಳಿತ ಈ ಚುನಾವಣೆಯ ಮೂಲಕ ಕೊನೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಎರಡನೇ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಶಾ ಇಂದು ಜಮ್ಮು-ಕಾಶ್ಮೀರದ ಮೆಂಧರ್ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಮೂರು ಕುಟುಂಬಗಳು ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದವು. ಒಂದು ವೇಳೆ 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರದೇ ಇರುತ್ತಿದ್ದರೆ ಆಗ ಪಂಚಾಯಿತಿ, ಬ್ಲಾಕ್ ಮತ್ತು ಜಿಲ್ಲಾ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಶಾ ಹೇಳಿದ್ದಾರೆ.
1947ರಿಂದ ಪಾಕಿಸ್ತಾನದ ವಿರುದ್ಧ ಹೋರಾಡಿದ ಪ್ರತಿಯೊಂದು ಯುದ್ಧದಲ್ಲಿ, ಈ ನೆಲ, ಜಮ್ಮು ಮತ್ತು ಕಾಶ್ಮೀರದ ಸೈನಿಕರು ಭಾರತವನ್ನು ರಕ್ಷಿಸಿದ್ದಾರೆ. ಜಮ್ಮು-ಕಾಶ್ಮೀರದ ಈ ಚುನಾವಣೆ ಇಲ್ಲಿನ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸುವ ಚುನಾವಣೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇಂದು, ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸಿದೆ ಮತ್ತು ಯುವಕರಿಗೆ ಕಲ್ಲುಗಳ ಬದಲಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಒಬಿಸಿ, ಹಿಂದುಳಿದ ವರ್ಗಗಳು, ಗುಜ್ಜರ್ ಬಕರ್ವಾಲ್ ಮತ್ತು ಪಹಾರಿಗಳಿಗೆ ಮೀಸಲಾತಿ ಸಿಕ್ಕಿತು ಎಂದರು.
ನಾನು ಸಂಸತ್ತಿನಲ್ಲಿ ಅದರ ಮಸೂದೆಯನ್ನು ಮಂಡಿಸಿದಾಗ ಫಾರೂಕ್ ಅಬ್ದುಲ್ಲಾ ಅವರ ಪಕ್ಷವು ಅದನ್ನು ವಿರೋಧಿಸಿತು ಮತ್ತು ಇಲ್ಲಿ ಗುಜ್ಜರ್ ಸಹೋದರರನ್ನು ಪ್ರಚೋದಿಸಲು ಪ್ರಾರಂಭಿಸಿತು. ಆಗ ನಾನು ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೆ. ನಾವು ಆ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.