ಕೊಡವ ಕುಟುಂಬಗಳ ನಡುವೆ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ : 336 ತಂಡಗಳ ನೋಂದಣಿ

ಹೊಸದಿಗಂತ ವರದಿ ಮಡಿಕೇರಿ:

ನಾಪೋಕ್ಲುವಿನಲ್ಲಿ ಮಾ.18ರಿಂದ ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದಲ್ಲಿ ಭಾಗವಹಿಸಲು 336 ತಂಡಗಳು ನೋಂದಾಯಿಸಿಕೊಂಡಿರುವುದಾಗಿ ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ತಿಳಿಸಿದ್ದಾರೆ.

ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 23ನೇ ವರ್ಷದ ಕೊಡವ ಕುಟುಂಬಗಳ ನಡುವಣ ಪ್ರತಿಷ್ಠಿತ ಕೌಟುಂಬಿಕ ಕೊಡವ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ `ಅಪ್ಪಚೆಟ್ಟೋಳಂಡ’ ಕುಟುಂಬದ ಪ್ರಾಯೋಜಕತ್ವದಲ್ಲಿ ಮಾ.18 ರಿಂದ ಏ.9ರ ವರೆಗೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಉದ್ಘಾಟಿಸಲಿದ್ದಾರೆ ಎಂದರು.

ವಿಜೇತ ತಂಡಕ್ಕೆ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಲಾಗುವುದು. ಕೊಡಗಿನ ಜನತೆ ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕೊಡವ ಹಾಕಿ ಅಕಾಡೆಮಿಯ 2022-23ನೇ ಸಾಲಿನ ಮಹಾಸಭೆ ಮಾ.13 ರಂದು ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ತಪ್ಪದೆ ಹಾಜರಾಗುವಂತೆ ಹೇಳಿದರು.

ಅಂದು ಬೆಳಗ್ಗೆ 10.30 ಗಂಟೆಗೆ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಅಗಲಿದ ಸದಸ್ಯರಿಗೆ ಸಂತಾಪ ಸೂಚನೆ, ಕಳೆದ ಮಹಾಸಭೆಯ ವರದಿ ವಾಚನ, ಆಡಳಿತ ಮಂಡಳಿಯ ವರದಿ ವಾಚನ, ಜಮಾ ಖರ್ಚು, ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ಬೆಂಬಲ ಸೂಚಿಸುವುದು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ದಿ.ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರು 1997ರಲ್ಲಿ ಅಕಾಡೆಮಿಯನ್ನು ಪ್ರಾರಂಭಿಸಿದ್ದು, ಪ್ರಸ್ತುತ 406 ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿವೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿರ್ದೇಶಕರಾದ ಚೆಯ್ಯಂಡ ಸತ್ಯ ಹಾಗೂ ಕಂಬೀರಂಡ ರಾಖಿ ಪೂವಣ್ಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!