ಇರಾಕ್, ಸಿರಿಯಾದ ಮೇಲೆ ಅಮೆರಿಕ ವೈಮಾನಿಕ ದಾಳಿಗೆ 40 ಮಂದಿ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾಕ್ (Iraq)ಮತ್ತು ಸಿರಿಯಾದಲ್ಲಿ (Syria) ಇರಾನ್‌ನ ರೆವಲ್ಯೂಷನರಿ ಗಾರ್ಡ್ (IRGC) ಮತ್ತು ಅದರ ಬೆಂಬಲಿತ ಸೇನಾಪಡೆಗಳಿಗೆ ಸಂಬಂಧಿಸಿದ 85 ಕ್ಕೂ ಹೆಚ್ಚು ಗುರಿಗಳ ವಿರುದ್ಧ ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆಸಿದೆ.

ಈ ದಾಳಿಯಿಂದ ಸಿರಿಯಾದಲ್ಲಿ 23 ಮತ್ತು ಇರಾಕ್‌ನಲ್ಲಿ 16 ಮಂದಿ ಸೇರಿ ಸುಮಾರು 40 ಜನರು ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದಲ್ಲಿ ಯುದ್ಧ ವರದಿ ಮಾಡುವ ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ರಾಮಿ ಅಬ್ದುಲ್‌ರೆಹಮಾನ್‌ ಹೇಳಿದ್ದಾರೆ.

ಕಳೆದ ಭಾನುವಾರ ಜೋರ್ಡಾನ್‌ನಲ್ಲಿ ಅಮೆರಿಕದ ಸೇನಾನೆಲೆ ಮೇಲೆ ಇರಾನ್‌ ಬೆಂಬಲಿತ ಬಂಡುಕೋರರು ಡ್ರೋನ್‌ ದಾಳಿ ನಡೆಸಿ, ಮೂವರು ಸೈನಿಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ.

ಹಲವು ಯುದ್ಧ ವಿಮಾನಗಳನ್ನು ಈ ಕಾರ್ಯಾಚರಣೆಗಳಲ್ಲಿ ಬಳಸಲಾಗಿದ್ದು, 85ಕ್ಕೂ ಹೆಚ್ಚು ಗುರಿಗಳನ್ನು ಧ್ವಂಸಗೊಳಿಸಲಾಯಿತು. ಧ್ವಂಸಗೊಂಡ ಗುರಿಗಳಲ್ಲಿ ಐಆರ್‌ಜಿಸಿಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಗುಪ್ತಚರ ಕೇಂದ್ರಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳು, ಡ್ರೋನ್‌ಗಳ ಸಂಗ್ರಹ, ಸಶಸ್ತ್ರ ಗುಂಪುಗಳಿಗೆ ಪೂರೈಕೆಯಾಗುತ್ತಿದ್ದ ಸರಕು ಮತ್ತು ಯುದ್ಧಸಾಮಗ್ರಿ ಸೌಲಭ್ಯಗಳು ಸೇರಿವೆ ಎಂದು ಅಮೆರಿಕ ಸೇನೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!