ಕಲಬುರಗಿಯಲ್ಲಿ5000 ಮೆಟ್ರಿಕ್ ಟನ್ ಸಾಮಥ್ಯ೯ದ ಕೋಲ್ಡ್ ಸ್ಟೋರೇಜ್ ಗೆ ಮಂಜೂರು: ಕೃಷಿ ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಕಲಬುರಗಿ:

ರೈತರು ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳು ಹಾಳಾಗದಂತೆ ಶೇಖರಣೆ ಮಾಡಲು ಕಲಬುರಗಿಯಲ್ಲಿ 9.80 ಕೋಟಿ ರೂ. ವೆಚ್ಚದಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಬುಧವಾರ ನಗರದ ಜೇವರ್ಗಿ ರಸ್ತೆಯಲ್ಲಿ ಕೋಟನೂರ (ಡಿ) ರೈತ ಸಂಪರ್ಕ ಕೇಂದ್ರದ ಹಿಂದುಗಡೆ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಗುಣ ನಿಯಂತ್ರಣ ತರಬೇತಿ ಕೇಂದ್ರ ಉದ್ಘಾಟಿಸಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕಲಬುರಗಿಯಲ್ಲಿ ಬೆಳೆದ ದ್ರಾಕ್ಷಿಗಳು ಮಾರಾಟವಾಗದೆ ರೈತರು ರಸ್ತೆಗೆ ಚೆಲ್ಲಿದನ್ನು ಕಣ್ಣಾರೆ ಕಂಡಿದ್ದೇನೆ. ಇದನ್ನು ತಪ್ಪಿಸಲೆಂದೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಸರ್ಕಾರದಿಂದಲೇ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ನಿರ್ಧರಿಸಿ ಈಗಾಗಲೆ ಟೆಂಡರ್ ಕರೆಯಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಈ ವರ್ಷದ ಅಂತ್ಯದಲ್ಲಿಯೇ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ರೈತರಿಗೆ ಸಮರ್ಪಿಸಲಾಗುವುದು ಎಂದರು.

ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 6800 ರೂ. ಜೊತೆಗೆ ರಾಜ್ಯ ಸರ್ಕಾರದ 6800 ರೂ., ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 13500 ರೂ. ಜೊತೆಗೆ ರಾಜ್ಯ ಸರ್ಕಾರದ 11500 ರೂ. ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್ ಗೆ ಕೇಂದ್ರ ಸರ್ಕಾರದ 18000 ರೂ. ಜೊತೆಗೆ ರಾಜ್ಯ ಸರ್ಕಾರದ 7000 ರೂ. ಸೇರಿಸಿ ಪರಿಹಾರ ನೀಡುವ ತೀರ್ಮಾನ ಕೈಗೊಳ್ಳುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಹಿತದೃಷ್ಟಿಯಿಂದ ಕಲಬುರಗಿ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದಲ್ಲಿ ಕೆ.ಕೆ.ಅರ್.ಡಿ.ಬಿ. ಮಂಡಳಿಯಿಂದ 30 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ. ಇದಲ್ಲದೆ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಡ್ರೋನ್ ಮೂಲಕ ಔಷಧಿ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಡಾ. ಉಮೇಶ ಜಿ. ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಡಾ. ಬಿ.ಜಿ.ಪಾಟೀಲ, ಶಶೀಲ ಜಿ. ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಭೀಮರಾಯನಗುಡಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ನಂದಿಕೂರ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ದಿನೇಶ ದೊಡಮನಿ,
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ನಿರ್ದೇಶಕ ಕರುಣಾಕರ ಜೆ, ಸಹಾಯಕ ನಿರ್ದೇಶಕ ಮೊಹ್ಮದ್ ಸಫಿಯೂದ್ದಿನ್, ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಸೇರಿದಂತೆ ತೊಗರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಮುಂತಾದವರು ಇದ್ದರು.

ತರಬೇತಿ ಕೇಂದ್ರಕ್ಕೆ ಗುದ್ದಲಿ ಪೂಜೆ;

ಕೋಟನೂರ್ (ಡಿ) ಕೃಷಿ ಇಲಾಖೆಯ ಆವರಣದಲ್ಲಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದಿಂದ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈತರ ತರಬೇತಿ ಕೇಂದ್ರ ಕಟ್ಟಡಕ್ಕೂ ಸಚಿವ ಬಿ.ಸಿ.ಪಾಟೀಲ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!