Friday, February 3, 2023

Latest Posts

64ರ ಇಳಿ ವಯಸ್ಸಲ್ಲೂ ಹೈ ಜೋಶ್: ಆರೋಗ್ಯ ಜಾಗೃತಿಗಾಗಿ ರಾಣಾ ಏಕಾಂಗಿ ಸೈಕ್ಲಿಂಗ್ ಪಯಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅವರಿಗೀಗ ಅರವತ್ತ ನಾಲ್ಕರ ಹರೆಯ. ಈ ಇಳಿ ವಯಸ್ಸಿನಲ್ಲೂ ದೇಶಸುತ್ತುವ ಅವರ ಕನಸು, ಆತ್ಮಸ್ಥೈರ್ಯ ಮಾತ್ರ ಕಡಿಮೆಯಾಗಿಲ್ಲ. ಸೈಕಲ್ ಮೂಲಕ ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಪ್ರಯಾಣ ಆರಂಭಿಸಿರುವ ಈ ದಿಟ್ಟ ಮಹಿಳೆಯ ದೀರ್ಘ ಪ್ರಯಾಣಕ್ಕೆ ಈಗ ಅಡ್ಡಿಯಾಗಿದೆ.
ಇವರ ಹೆಸರು ಕಮಲೇಶ್ ರಾಣಾ. ಅವರು ಹರಿಯಾಣದ ರೋಹ್ಟಕ್ ನಿವಾಸಿ, ಸೈಕ್ಲಿಂಗ್ ಅಂದರೆ ಇವರಿಗೆ ಪಂಚಪ್ರಾಣವಂತೆ. ಸೈಕ್ಲಿಂಗ್ ಮೂಲಕ ‘ದೇಹದ ಆರೋಗ್ಯ ಸುಸ್ಥಿತಿಯಲ್ಲಿಡಿ’ ಎಂಬ ಧ್ಯೇಯದೊಂದಿಗೆ ಅವರು ಸೈಕ್ಲಿಂಗ್ ನಡೆಸುತ್ತಿದ್ದಾರೆ.

ದೀರ್ಘ ಪ್ರಯಾಣಕ್ಕೆ ಬ್ರೇಕ್!
ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ ಸೈಕ್ಲಿಂಗ್ ಮಾಡುತ್ತಿರುವ ರಾಣಾ ಅವರ ಪ್ರಯಾಣಕ್ಕೆ ಮಂಗಳೂರಿನಲ್ಲಿ ಬ್ರೇಕ್ ಬಿದ್ದಿದೆ. ಇಲ್ಲಿನ ಕುಳಾಯಿಯಲ್ಲಿ ಡಿ.22ರಂದು ಖಾಸಗಿ ಬಸ್ಸೊಂದು ಇವರು ಪ್ರಯಾಣಿಸುತ್ತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಮಲೇಶ್ ರಾಣಾ ಅವರ ಬಲ ಕೈ ಮುರಿತಕ್ಕೊಳಗಾಗಿದ್ದು, ಸದ್ಯ ಅವರು ಮಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೈಕಲ್ ಪ್ರಯಾಣ ಕೆಲದಿನಗಳ ಕಾಲ ಸ್ಥಗಿತ
‘ಅಪಘಾತದಿಂದಾಗಿ ಸೈಕಲ್ ಪ್ರಯಾಣ ಕೆಲದಿನಗಳ ಕಾಲ ಸ್ಥಗಿತಗೊಂಡಿದೆ. ಕೈಗೆ ಹಾಕಿರುವ ಬ್ಯಾಂಡೇಜ್ ತೆಗೆದ ಕೂಡಲೇ ಕೈಯ ಎರಡು ಬೆರಳುಗಳ ಸಹಾಯದಿಂದ ಸೈಕಲ್ ಪಯಣ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
ಸೈಕಲ್ ಪ್ರಯಾಣದಿಂದಾಗಿ ನನ್ನ ಆರೋಗ್ಯ ಬಹಳಷ್ಟು ಸುಧಾರಿಸಿದೆ. ಕೊಲೆಸ್ಟ್ರಾಲ್, ಡಯಾಬಿಟಿಸ್‌ನಂತಹ ರೋಗಗಳು ದೂರವಾಗಿವೆ ಎನ್ನುತ್ತಾರವರು.

3600 ಕಿಮೀ ಪ್ರಯಾಣ
ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟಂಬರ್ 26ರಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಆರಂಭಿಸಿದ್ದೆ. ಡಿ.22ರಂದು ಮಂಗಳೂರು ತಲುಪುವವರೆಗೆ 3600 ಕಿ.ಮೀ. ಕ್ರಮಿಸಿದ್ದೇನೆ. ಸೈಕ್ಲಿಂಗ್ ವೇಳೆ ದಿನವೊಂದಕ್ಕೆ ಸರಾಸರಿ 130ರಿಂದ 140 ಕಿ.ಮೀ. ಪ್ರಯಾಣ. ರಾತ್ರಿ ಹೊತ್ತು ಮಂದಿರ, ಗುರುದ್ವಾರ ಅಥವಾ ಪೊಲೀಸ್ ಠಾಣೆಗಳಲ್ಲಿ ಆಶ್ರಯ ಪಡೆಯುತ್ತೇನೆ. ಹಾಗಾಗಿ ಇಡೀ ಭಾರತ ನನ್ನ ಜತೆಗಿದೆ’ಎಂದು ನಗುಮುಖದಿಂದಲೇ ತನ್ನ ಪ್ರಯಾಣದ ಕುರಿತಂತೆ ರಾಣಾ ಅವರು ವಿವರಿಸಿದ್ದಾರೆ.
ನಾನು ಆಸ್ಪತ್ರೆಯಲ್ಲಿರುವುದನ್ನು ತಿಳಿದ ಸಾಮಾಜಿಕ ಕಾರ್ಯಕರ್ತ ನಂದಗೋಪಾಲ್ ಮತ್ತು ಅವರ ಪತ್ನಿ ಸಚಿತಾ ತಮ್ಮ ಮನೆಯಲ್ಲಿ ಆತಿಥ್ಯ- ಆಶ್ರಯ ನೀಡಿದ್ದಾರೆ ಎನ್ನುವ ಅವರು ಸಹಾಯ ಮಾಡಿದವರನ್ನು ನೆನಪಿಸಲು ಮರೆಯಲಿಲ್ಲ.

ಚಿನ್ನದ ಪದಕ ವಿಜೇತೆ
ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್‌ಗಳಲ್ಲಿ ಚಿನ್ನದ ಪದಕ ಪಡೆದಿರುವ ಕಮಲೇಶ್ ರಾಣಾ ಅವರು, 2010ರಲ್ಲಿ 1500 ಮೀಟರ್ ಓಟದಲ್ಲಿ ಮಲೇಶಿಯಾದಲ್ಲಿ ನಡೆದ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರು. 2010 ನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ವಿಶ್ವ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದರು. ರಾಷ್ಟ್ರೀಯ ಮಾಸ್ಟರ್ಸ್ ಸೈಕ್ಲಿಂಗ್ ಸ್ಪರ್ಧೆಗಳಲ್ಲೂ ಚಿನ್ನದ ಪದಕಗಳನ್ನು ಇವರು ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!