ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿಯ ಗೋಕಲ್ಪುರಿಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಏಳುಮಂದಿ ಸಾವನ್ನಪ್ಪಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬೆಂಕಿಗೆ ಆ ಪ್ರದೇಶದಲ್ಲಿರುವ ಸುಮಾರು 60 ಗುಡಿಸಲುಗಳು ಸುಟ್ಟುಕರಕಲಾಗಿವೆ. ಸತತ ಪ್ರಯತ್ನಗಳ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳ ಮಾಹಿತಿ ನೀಡಿದೆ.
ಘಟನೆ ನಡೆದ ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ 13 ತಂಡಗಳು ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂದು ದೆಹಲಿ ಈಶಾನ್ಯ ವಲಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮುಂಜಾನೆ 4ಗಂಟೆ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ, ನಿಯಂತ್ರಣಕ್ಕೆ ತಂದಿದ್ದೇವೆ. ಬೆಂಕಿ ತಗುಲಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ಈ ಕುರಿತು ತನಿಖೆ ಪ್ರಾರಂಭಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ದುಃಖದ ಸುದ್ದಿ ಕೇಳಿದೆ. ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ