June 18, 2026
Thursday, June 18, 2026
spot_img

work from home ಉದ್ಯೋಗದ ಆಸೆ ತೋರಿಸಿ ₹860 ಕೋಟಿ ವಂಚನೆ: ಮೋಸ ಹೋದವರಲ್ಲಿ ಮಹಿಳೆಯರದ್ದೇ ಪಾಲು ಹೆಚ್ಚು

ಹೊಸದಿಗಂತ ವರದಿ ಚಿತ್ರದುರ್ಗ:

ಮನೆಯಲ್ಲೇ ಕೆಲಸ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು ಎಂಬ ಭರವಸೆ ನೀಡಿ ನೂರಾರು ಜನರಿಂದ ಹಣ ಪಡೆದು ವಂಚಿಸಿರುವ ಆರೋಪ ಖಾಸಗಿ ಸಂಸ್ಥೆಯೊಂದರ ವಿರುದ್ಧ ಕೇಳಿಬಂದಿದೆ. ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿದ್ದ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್ ಸಂಸ್ಥೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.

ಮನೆಯಲ್ಲೇ ಉದ್ಯೋಗದ ಭರವಸೆ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 9 ಶಾಖೆಗಳನ್ನು ಹೊಂದಿದ್ದ ಸಂಸ್ಥೆ, 2023ರಿಂದ 2026ರ ಜನವರಿವರೆಗೆ ಹೂಡಿಕೆದಾರರಿಗೆ ಭರವಸೆ ನೀಡಿದಂತೆ ಹಣ ಪಾವತಿಸುತ್ತಿತ್ತು. ಬಳಿಕ ಏಕಾಏಕಿ ಪಾವತಿ ಸ್ಥಗಿತಗೊಂಡಿದೆ ಎನ್ನಲಾಗಿದೆ. ಕರಪತ್ರಗಳ ಮೂಲಕ ಜನರನ್ನು ಆಕರ್ಷಿಸಿ, ವಿವಿಧ ಯಂತ್ರೋಪಕರಣಗಳ ಸಹಾಯದಿಂದ ಮನೆಯಲ್ಲೇ ಸ್ವಯಂ ಉದ್ಯೋಗ ಮಾಡಬಹುದೆಂದು ನಂಬಿಸಲಾಗಿತ್ತು.

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ

16ಕ್ಕೂ ಹೆಚ್ಚು ಪ್ಯಾಕಿಂಗ್ ಹಾಗೂ ಮಿಷನ್ ಆಧಾರಿತ ಉತ್ಪನ್ನಗಳಿಗೆ ಭದ್ರತಾ ಠೇವಣಿ ಸಂಗ್ರಹಿಸಲಾಗುತ್ತಿತ್ತು. ₹1 ಲಕ್ಷ ಹೂಡಿಕೆಗೆ ₹22 ಸಾವಿರ ಆದಾಯ ಸಿಗುತ್ತದೆ ಎಂದು ಹೇಳಲಾಗಿತ್ತು. ಇದರಿಂದ ಪ್ರೇರಿತರಾದ ಅನೇಕ ಮಹಿಳೆಯರು ಕುಟುಂಬದವರಿಗೂ ತಿಳಿಸದೇ ಹಣ ಹೂಡಿಕೆ ಮಾಡಿದ್ದರು. ಕೆಲವರು ಸಾಲ ಮಾಡಿ, ಆಭರಣ ಒತ್ತೆ ಇಟ್ಟು, ಜಾಗ ಮಾರಾಟ ಮಾಡಿ ₹3 ಲಕ್ಷದಿಂದ ₹30 ಲಕ್ಷದವರೆಗೆ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

2026ರಿಂದ ಸ್ಥಗಿತಗೊಂಡ ಹಣ ಪಾವತಿ

2026ರ ಜನವರಿಯಿಂದ ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಹಣ ಪಾವತಿ ಎರಡೂ ಸ್ಥಗಿತಗೊಂಡಿವೆ. ಈ ಬಗ್ಗೆ ವಿಚಾರಿಸಿದಾಗ ಸಂಸ್ಥೆಯ ಸಿಬ್ಬಂದಿ ಖಾತೆ ಸಮಸ್ಯೆ ನೆಪ ಹೇಳುತ್ತಿದ್ದರು ಎಂದು ಹೂಡಿಕೆದಾರರು ಆರೋಪಿಸಿದ್ದಾರೆ. ಇದೀಗ ಚಿತ್ರದುರ್ಗ ಶಾಖೆಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ:

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಆರೋಪ

ಹಾವೇರಿ, ರಾಯಚೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇದೇ ಮಾದರಿಯ ವಂಚನೆ ನಡೆದಿದ್ದು, ಒಟ್ಟಾರೆ ₹860 ಕೋಟಿ ವಂಚನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪೊಲೀಸರಿಗೆ ದೂರು ಸಲ್ಲಿಕೆ

ಮೋಸಕ್ಕೊಳಗಾದವರು ನ್ಯಾಯಕ್ಕಾಗಿ ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರ ಮೊರೆ ಹೋಗಿದ್ದು, ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರಿಗೆ ದೂರು ಸಲ್ಲಿಸಲಾಗಿದೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ನೊಂದ ಹೂಡಿಕೆದಾರರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !