October 14, 2026
Wednesday, October 14, 2026
spot_img

ಸಕಲೇಶಪುರದಲ್ಲಿ ನೂರಾರು ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್‌ಗಳು ಸುಟ್ಟು ಭಸ್ಮ

ಹೊಸದಿಗಂತ ವರದಿ ಹಾಸನ:

ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸೇರಿದಂತೆ ನೂರಾರು ಮಂದಿಗೆ ಸೇರಿದ ಗುರುತಿನ ದಾಖಲೆಗಳನ್ನು ಅಪರಿಚಿತರು ಸುಟ್ಟು ಹಾಕಿರುವ ಘಟನೆ ಸಕಲೇಶಪುರ ಪಟ್ಟಣದ ಶ್ರೀಗಂಧ ಹೋಟೆಲ್ ಸಮೀಪ ನಡೆದಿದೆ.

ಹಾಸನ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಮಹಿಳೆಯರು ಮತ್ತು ಪುರುಷರಿಗೆ ಸೇರಿದ ನೂರಾರು ದಾಖಲೆಗಳನ್ನು ಸುಟ್ಟು ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಸನ, ರಾಮನಗರ, ಕೊಟ್ಟೂರು, ಬಳ್ಳಾರಿ, ವಿಜಯಪುರ ಹಾಗೂ ಮೈಸೂರು ಜಿಲ್ಲೆಗಳ ಜೊತೆಗೆ ಆಂಧ್ರಪ್ರದೇಶ ಮೂಲದವರ ಗುರುತಿನ ಚೀಟಿಗಳು ಸ್ಥಳದಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ದಾಖಲೆಗಳನ್ನು ಸುಟ್ಟು ಹಾಕಿರುವ ಸ್ಥಳದ ಪಕ್ಕದಲ್ಲೇ ಇನ್ನೂ ಅನೇಕ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ಗಳು ಬಿದ್ದಿರುವುದು ಕಂಡುಬಂದಿದೆ.

ಇಷ್ಟೊಂದು ಸಂಖ್ಯೆಯ ವಿವಿಧ ದಾಖಲೆಗಳು ಒಂದೇ ಸ್ಥಳದಲ್ಲಿ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದಾಖಲೆಗಳನ್ನು ಯಾರು ತಂದಿಟ್ಟಿದ್ದಾರೆ, ಯಾವ ಉದ್ದೇಶಕ್ಕಾಗಿ ಸುಟ್ಟು ಹಾಕಲಾಗಿದೆ ಎಂಬ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read