ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಯನ್ನು ಸ್ವೀಕರಿಸಲು ಜನರು ಹಿಂದೆ ಮುಂದೆ ನೋಡುತ್ತಾರೆ. ಸ್ಪಾಮ್ ಅಥವಾ ಇನ್ಯಾವುದೋ ಕಾಲ್ ಇರಬಹುದು ಎಂದು ಇಗ್ನೋರ್ ಮಾಡುತ್ತಾರೆ. ಇದೀಗ ಎಲ್ಲ ಫೋನ್ಗಳಲ್ಲಿಯೂ ನವೆಂಬರ್ ಒಂದರಿಂದ ಕರೆ ಮಾಡುತ್ತಿರುವ ವ್ಯಕ್ತಿಯ ಹೆಸರು ಡಿಸ್ಪ್ಲೇ ಆಗಲಿದೆ.
ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಕರೆಗಳನ್ನು ಗುರುತಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ನವೆಂಬರ್ ಒಂದರಿಂದಲೇ ದೇಶದ ದೂರಸಂಪರ್ಕ ಸೇವಾ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ದೂರಸಂಪರ್ಕ ಇಲಾಖೆ ಸೂಚಿಸಿದೆ.
ಈ ಮುನ್ನ ಕರೆ ಬಂದಾಗ ಮೊಬೈಲ್ ಸಂಖ್ಯೆ ಮಾತ್ರ ಕಾಣಿಸುತ್ತಿತ್ತು. ಆದರೆ ನವೆಂಬರ್ ಒಂದರಿಂದ ಮೊಬೈಲ್ ನಂಬರ್ ಹಾಗೂ ಕರೆ ಮಾಡುತ್ತಿರುವ ವ್ಯಕ್ತಿಯ ಹೆಸರು ಕೂಡ ಕಾಣಿಸುತ್ತದೆ. ಇದರಿಂದಾಗ ಜನ ಯಾವ ಕರೆಗಳನ್ನು ರಿಸೀವ್ ಮಾಡಬೇಕು ಯಾವುದನ್ನು ಇಗ್ನೋರ್ ಮಾಡಬೇಕು ಎಂದು ನಿರ್ಧರಿಸಬಹುದು. ಸ್ಪಾಮ್, ಸ್ಕ್ಯಾಮ್ ಹಾಗೂ ಆನ್ಲೈನ್ ವಂಚನೆ ಇದರಿಂದ ಕಡಿಮೆಯಾಗುವ ಸಾಧ್ಯತೆ ಇದೆ.
ಮೊಬೈಲ್ನಲ್ಲಿ ಸೇವ್ ಆಗದ ಸಂಖ್ಯೆಯಿಂದ ಕರೆ ಬಂದಾಗ ಸಾಮಾನ್ಯವಾಗಿ ಆ ಸಂಖ್ಯೆಯಷ್ಟೇ ಕಾಣಿಸುತ್ತದೆ. ಆದರೆ ಸಿಎನ್ಎಪಿ ವ್ಯವಸ್ಥೆ ಜಾರಿಯಾದ ಬಳಿಕ, ಗ್ರಾಹಕರ ಸಂಪರ್ಕ ಪಟ್ಟಿಯಲ್ಲಿ ಸೇವ್ ಆಗದ ದೇಶೀಯ ಸಂಖ್ಯೆಯಿಂದ ಕರೆ ಬಂದರೆ ದೂರಸಂಪರ್ಕ ಕಂಪನಿಯ ದಾಖಲೆಗಳಲ್ಲಿರುವ ಹೆಸರನ್ನು ಪ್ರದರ್ಶಿಸಲಾಗುತ್ತದೆ. ಈಗಾಗಲೇ ಸಂಪರ್ಕ ಪಟ್ಟಿಯಲ್ಲಿ ಸಂಖ್ಯೆ ಸೇವ್ ಆಗಿದ್ದರೆ ಆ ಪಟ್ಟಿಯಲ್ಲಿರುವ ಹೆಸರೇ ಕಾಣಿಸುತ್ತದೆ.
ಈ ಸೇವೆಗಾಗಿ ಗ್ರಾಹಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಥವಾ ಯಾವುದೇ ಹೆಚ್ಚುವರಿ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. ದೂರಸಂಪರ್ಕ ಇಲಾಖೆಯ ಅಕ್ಟೋಬರ್ 13ರ ನಿರ್ದೇಶನದ ಪ್ರಕಾರ, 4G ಮತ್ತು ಅದಕ್ಕಿಂತ ಮುಂದಿನ ತಂತ್ರಜ್ಞಾನ ಆಧಾರಿತ ಮೊಬೈಲ್ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಸಂಖ್ಯೆಯ ಜೊತೆ ಹೆಸರು ಬಂತು ಎಂದಮಾತ್ರಕ್ಕೆ ಎಲ್ಲವೂ ಸೇಫ್ ಎನ್ನಲು ಸಾಧ್ಯವಿಲ್ಲ. ಈಗಲೂ ಪರಿಶೀಲನೆ ಮಾಡಿ ನಂತರ ಕರೆ ರಿಸೀವ್ ಮಾಡಿ ಎಂದು ಇಲಾಖೆ ತಿಳಿಸಿದೆ.



