ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಎಂದರೆ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳ ದಹನ ಸಾಮಾನ್ಯ. ಆದರೆ ಈ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯ ದಸರಾ ಆಚರಣೆಯಲ್ಲಿ 30 ಅಡಿ ಎತ್ತರದ ಬೃಹತ್ ಜಿರಳೆಯೂ ಬೆಂಕಿಗಾಹುತಿಯಾಗಲಿದೆ.
ಹೌದು! ಸ್ವಚ್ಛತೆಯ ಸಂದೇಶ ಸಾರುವ ಉದ್ದೇಶದಿಂದ ಜಿರಳೆಯ ಪ್ರತಿಕೃತಿಯನ್ನು ದಹಿಸಲು ರಾಮಲೀಲಾ ಸಮಿತಿ ನಿರ್ಧರಿಸಿದ್ದು, ಈ ವಿಭಿನ್ನ ಪ್ರಯತ್ನ ಈಗ ಗಮನ ಸೆಳೆದಿದೆ.
ದೆಹಲಿಯ ಪಿತಾಂಪುರದಲ್ಲಿ ರಾಮಲೀಲಾ ಆಯೋಜಿಸುವ ಶ್ರೀ ಕೇಶವ್ ರಾಮಲೀಲಾ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಮನೆ, ಬೀದಿ, ನೆರೆಹೊರೆ ಹಾಗೂ ಸಮಾಜದಲ್ಲಿನ ಕೊಳಕು ಮತ್ತು ಅನೈರ್ಮಲ್ಯವನ್ನು ತೊಡೆದುಹಾಕುವ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶ ಎಂದು ಸಮಿತಿ ತಿಳಿಸಿದೆ. ಸ್ವಚ್ಛ ಭಾರತ ಮತ್ತು ಸ್ವಚ್ಛ ದೆಹಲಿ ಅಭಿಯಾನಗಳ ಸಂದೇಶವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ರಾಜಕೀಯ ಉದ್ದೇಶವಿಲ್ಲ
ಸಮಿತಿಯ ಅಧ್ಯಕ್ಷರೂ ಆಗಿರುವ ಬಿಜೆಪಿ ಶಾಸಕ ಅಶೋಕ್ ಗೋಯಲ್ ದೇವರಾಹ ಮಾತನಾಡಿ, ವಿಜಯದಶಮಿ ಕೆಟ್ಟದರ ವಿರುದ್ಧ ಒಳ್ಳೆಯದರ ಗೆಲುವನ್ನು ಸಾರುವ ಹಬ್ಬವಾಗಿದೆ. ಈ ಹಿಂದೆ ದೇಶವನ್ನು ಕಾಡುತ್ತಿದ್ದ ನಕ್ಸಲಿಸಂ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ಪ್ರತಿನಿಧಿಸುವ ಪ್ರತಿಕೃತಿಗಳನ್ನೂ ದಹಿಸಲಾಗಿದೆ. ಈ ಬಾರಿ ಅನೈರ್ಮಲ್ಯವನ್ನು ಸಂಕೇತಿಸುವ ಜಿರಳೆಯ ಪ್ರತಿಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ನಿರ್ಧಾರಕ್ಕೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಮೇ 15ರಂದು ಸುಪ್ರೀಂ ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮಾಡಿದ ‘ಜಿರಳೆ’ ಕುರಿತ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಆ ಹೇಳಿಕೆಗಳ ಹಿನ್ನೆಲೆಯಲ್ಲಿ CJP ಚಳವಳಿ ವ್ಯಂಗ್ಯಾತ್ಮಕವಾಗಿ ರೂಪುಗೊಂಡಿತು. ಆದರೆ ಜಿರಳೆ ಪ್ರತಿಕೃತಿ ದಹನಕ್ಕೂ ಈ ರಾಜಕೀಯ ಬೆಳವಣಿಗೆಗಳಿಗೂ ಸಂಬಂಧವಿಲ್ಲ ಎಂಬುದು ರಾಮಲೀಲಾ ಸಮಿತಿಯ ನಿಲುವಾಗಿದೆ.



