October 16, 2026
Friday, October 16, 2026
spot_img

ದಸರಾ ‘ಡ್ರೋನ್‌ ಶೋ’ ವೇಳೆ ಖಾಸಗಿ ಡ್ರೋನ್‌ ಹಾರಿಸಿದರೆ ಸಂಕಷ್ಟ ಗ್ಯಾರಂಟಿ: ಸಿಇಎಸ್‌ಸಿಯಿಂದ ಬಿಗ್ ವಾರ್ನಿಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ದಸರಾ-2026ರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ಸಿದ್ಧವಾಗಿರುವ ಡ್ರೋನ್‌ ಪ್ರದರ್ಶನದ ವೇಳೆ ಖಾಸಗಿ ಡ್ರೋನ್‌ ಹಾರಿಸುವವರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸಿಇಎಸ್‌ಸಿ) ಖಡಕ್ ಎಚ್ಚರಿಕೆ ನೀಡಿದೆ. ಅನುಮತಿ ಇಲ್ಲದೆ ಡ್ರೋನ್‌ ಹಾರಿಸಿ ಪ್ರದರ್ಶನದ ದೃಶ್ಯಗಳನ್ನು ಸೆರೆಹಿಡಿಯುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಿಗಮ ಸ್ಪಷ್ಟಪಡಿಸಿದೆ.

ಯಾವಾಗ ನಡೆಯಲಿದೆ ಡ್ರೋನ್‌ ಪ್ರದರ್ಶನ?

ಮೈಸೂರು ದಸರಾ ಉತ್ಸವದ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್‌ 17, 18, 20 ಮತ್ತು 21ರಂದು ಡ್ರೋನ್‌ ಪ್ರದರ್ಶನ ಆಯೋಜಿಸಲಾಗಿದೆ. ಆಕಾಶದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸುವ ನೆಪದಲ್ಲಿ ಖಾಸಗಿ ಡ್ರೋನ್‌ಗಳ ಹಾರಾಟದಿಂದ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ:

ಅನುಮತಿಯಿಲ್ಲದೆ ಡ್ರೋನ್‌ ಹಾರಿಸಿದರೆ ಕ್ರಮ

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಇಎಸ್‌ಸಿ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಖಾಸಗಿ ಡ್ರೋನ್‌ ಹಾರಿಸುವಂತಿಲ್ಲ ಎಂದು ತಿಳಿಸಿದೆ.

ಪ್ರದರ್ಶನದ ದೃಶ್ಯಗಳನ್ನು ಸೆರೆಹಿಡಿಯುವ ಉದ್ದೇಶದಿಂದಲೂ ಈ ನಿಯಮವನ್ನು ಉಲ್ಲಂಘಿಸಲು ಅವಕಾಶವಿಲ್ಲ. ಅನುಮತಿಯಿಲ್ಲದೆ ಡ್ರೋನ್‌ ಮೂಲಕ ಚಿತ್ರೀಕರಿಸಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.

ಡ್ರೋನ್‌ ವಶಕ್ಕೆ ಪಡೆಯುವ ಎಚ್ಚರಿಕೆ

ನಿಯಮ ಉಲ್ಲಂಘಿಸಿ ಡ್ರೋನ್‌ ಹಾರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಜೊತೆಗೆ, ಚಿತ್ರೀಕರಣಕ್ಕೆ ಬಳಸಿದ ಡ್ರೋನ್‌ಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎಂದು ಸಿಇಎಸ್‌ಸಿ ಎಚ್ಚರಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Must Read