ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮನೆ ಎಂದರೆ ನಮಗೆ ಅತ್ಯಂತ ಸುರಕ್ಷಿತ ಮತ್ತು ನೆಮ್ಮದಿಯ ತಾಣ. ಆದರೆ, ಅದೇ ಮನೆಯೊಳಗೆ ನಾವು ಸದಾ ಸೇವಿಸುವ ಗಾಳಿ ಎಷ್ಟು ಶುದ್ಧವಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಾವು ಮನೆಯನ್ನು ಸುಂದರವಾಗಿಡಲು ಮತ್ತು ಸುವಾಸನೆಯಿಂದ ಇಡಲು ಬಳಸುವ ಕೃತಕ ವಸ್ತುಗಳೇ ಇಂದು ನಮಗೆ ಅರಿಯದಂತೆ ಉಸಿರಾಟದ ತೊಂದರೆಗಳನ್ನು ತಂದೊಡ್ಡುತ್ತಿವೆ.
ಉತ್ತಮ ಸುವಾಸನೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ಗಾಢವಾದ ಪರ್ಫ್ಯೂಮ್ಗಳು, ರೂಮ್ ಫ್ರೆಶ್ನರ್ಗಳು, ಮತ್ತು ಮಸ್ಕಿಟೋ ಲಿಕ್ವಿಡ್ಗಳಲ್ಲಿ ‘ಬಾಷ್ಪಶೀಲ ಸಾವಯವ ಸಂಯುಕ್ತಗಳು’ ಎಂಬ ರಾಸಾಯನಿಕಗಳಿರುತ್ತವೆ. ಇವು ಗಾಳಿಯಲ್ಲಿ ಬೆರೆತಾಗ ನಮಗೆ ತಕ್ಷಣಕ್ಕೆ ಸುವಾಸನೆಯ ಅನುಭವ ನೀಡಿದರೂ, ದೀರ್ಘಾವಧಿಯಲ್ಲಿ ಶ್ವಾಸಕೋಶದ ಒಳಪೊರೆಯನ್ನು ಕೆರಳಿಸುತ್ತವೆ. ಇದರಿಂದಾಗಿ ನಿರಂತರ ಕೆಮ್ಮು, ಗಂಟಲು ಕಿರಿಕಿರಿ ಮತ್ತು ನೆಗಡಿ ಕಾಣಿಸಿಕೊಳ್ಳಬಹುದು.
ಸಾಮಾನ್ಯವಾಗಿ ಹೊರಗಿನ ಧೂಳು ಮತ್ತು ವಾಹನಗಳ ಹೊಗೆಯನ್ನು ಮಾತ್ರ ನಾವು ಮಾಲಿನ್ಯವೆಂದು ಭಾವಿಸುತ್ತೇವೆ. ಆದರೆ ಮನೆಯೊಳಗಿನ ಈ ರಸಾಯನಿಕ ಸುವಾಸನೆಗಳು ಅಸ್ತಮಾ, ಉಬ್ಬಸ ಮತ್ತು ಶ್ವಾಸಕೋಶದ ಸಮಸ್ಯೆಯಿರುವವರಿಗೆ ತೀವ್ರ ತೊಂದರೆ ಉಂಟುಮಾಡುತ್ತವೆ. ವಿಶ್ರಾಂತಿ ಪಡೆಯಬೇಕಾದ ಮನೆಯಲ್ಲೇ ಎದೆ ಬಿಗಿಯಾದಂತಾಗುವುದು, ಉಸಿರಾಟಕ್ಕೆ ಕಷ್ಟವಾಗುವುದು ಮತ್ತು ಸೀನು ಬರುವುದು ಒಳಾಂಗಣ ವಾಯು ಮಾಲಿನ್ಯದ ಮುಖ್ಯ ಲಕ್ಷಣಗಳಾಗಿವೆ.
ಮನೆಯಲ್ಲಿ ಪೂಜೆಗೆ ಬಳಸುವ ಅಗರಬತ್ತಿ ಅಥವಾ ಸುಗಂಧ ದ್ರವ್ಯಗಳ ಹೊಗೆಯೂ ಸಹ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮುಚ್ಚಿದ ಕೋಣೆಯಲ್ಲಿ ಇವುಗಳ ಹೊಗೆಯನ್ನು ನಿರಂತರವಾಗಿ ಸೇವಿಸುವುದರಿಂದ ಶ್ವಾಸಕೋಶದ ಗಾಳಿಯಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಕ್ಕಳಲ್ಲಂತೂ ಇದು ಅಲರ್ಜಿಗೆ ಮುಖ್ಯ ಕಾರಣವಾಗಬಹುದು.
ಪರಿಹಾರಗಳು
ಪ್ರತಿದಿನ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆಗೆದು ಹೊರಗಿನ ನೈಸರ್ಗಿಕ ಬೆಳಕು ಮತ್ತು ಗಾಳಿ ಮನೆಗೆ ಬರುವಂತೆ ಮಾಡಿ.
ಗಾಢವಾದ ಸೆಂಟ್, ಸ್ಪ್ರೇಗಳ ಬದಲಿಗೆ ನೈಸರ್ಗಿಕ ಗಾಳಿಯನ್ನು ಆನಂದಿಸಿ.
ಮನೆಗೆ ನೈಸರ್ಗಿಕವಾಗಿ ಗಾಳಿ ಶುದ್ಧೀಕರಿಸುವ ಸಸಿಗಳನ್ನು ನೆಡುವುದು ಉತ್ತಮ.
ನಿಮ್ಮ ಮನೆ ಕೇವಲ ಸುವಾಸನೆಯಿಂದ ಕೂಡಿದ್ದರೆ ಸಾಲದು, ಅದು ಉಸಿರಾಡಲು ಯೋಗ್ಯವಾದ ಶುದ್ಧ ಗಾಳಿಯನ್ನು ಹೊಂದಿರಬೇಕು. ಕೃತಕ ಸುವಾಸನೆಗಳಿಂದ ದೂರವಿದ್ದು, ನೈಸರ್ಗಿಕ ಗಾಳಿಗೆ ಒತ್ತು ನೀಡಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಿ.



