October 17, 2026
Saturday, October 17, 2026
spot_img

ಗೃಹಜ್ಯೋತಿ ಯೋಜನೆ: ಬೆಂಗಳೂರಿನ 16 ಲಕ್ಷ ಗ್ರಾಹಕರಿಗೆ ಸಂಕಷ್ಟ, ದಾಖಲೆ ಪರಿಶೀಲನೆಗೆ ಅ.31 ಕೊನೆಯ ಗಡುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಸಂಕಷ್ಟ ಎದುರಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ದಾಖಲೆಗಳ ಮರುಪರಿಶೀಲನೆ ಪೂರ್ಣಗೊಳ್ಳದ ಕಾರಣ ಸುಮಾರು 16 ಲಕ್ಷಕ್ಕೂ ಹೆಚ್ಚು ಗ್ರಾಹಕರು ಯೋಜನೆಯ ಸೌಲಭ್ಯದಿಂದ ತಾತ್ಕಾಲಿಕವಾಗಿ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ದಾಖಲೆ ಪರಿಶೀಲನೆ ಪೂರ್ಣಗೊಳಿಸಲು ಅಕ್ಟೋಬರ್‌ 31, 2026ರವರೆಗೆ ಗಡುವು ನೀಡಲಾಗಿದೆ.

16 ಲಕ್ಷ ಮನೆಗಳ ಪರಿಶೀಲನೆಗೆ ತೊಡಕು

ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 69 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಯೋಜನೆಯ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಸುಮಾರು 16.09 ಲಕ್ಷ ಮನೆಗಳು ಬೀಗ ಹಾಕಿದ ಸ್ಥಿತಿಯಲ್ಲಿದ್ದರೆ, 28,519 ಮನೆಗಳು ಖಾಲಿ ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ಮೀಟರ್‌ ರೀಡರ್‌ಗಳು ಮತ್ತು ಸಿಬ್ಬಂದಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಿದರೂ ಕೆಲ ಮನೆಗಳಲ್ಲಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:

ಮನೆ ಮಾಲೀಕರು ಬೇರೆಡೆ ವಾಸಿಸುತ್ತಿರುವುದು, ಬಾಡಿಗೆದಾರರು ಮನೆ ಖಾಲಿ ಮಾಡಿರುವುದು ಸೇರಿದಂತೆ ಹಲವು ಕಾರಣಗಳಿಂದ ಈ ಸಮಸ್ಯೆ ಎದುರಾಗಿದೆ. ಇನ್ನು ಸುಮಾರು 5.5 ಲಕ್ಷ ಗ್ರಾಹಕರು ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಪರಿಶೀಲನೆ ಪೂರ್ಣಗೊಳ್ಳದ ಸಂಪರ್ಕಗಳ ಫಲಾನುಭವಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಕ್ಟೋಬರ್‌ 31ರೊಳಗೆ ಪರಿಶೀಲನೆ ಪೂರ್ಣಗೊಳಿಸಿ

ಬೀಗ ಹಾಕಿದ ಮನೆಗಳ ಮಾಲೀಕರು ಮತ್ತು ಬಾಡಿಗೆದಾರರಿಗೆ ಮತ್ತೊಂದು ಅವಕಾಶ ಕಲ್ಪಿಸುವ ಉದ್ದೇಶದಿಂದ ಬೆಸ್ಕಾಂ ಅಕ್ಟೋಬರ್‌ 31ರವರೆಗೆ ಗಡುವು ವಿಸ್ತರಿಸಿದೆ. ಸೌಲಭ್ಯ ಮುಂದುವರಿಯಲು ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

ಗ್ರಾಹಕರು ಏನು ಮಾಡಬೇಕು?

ಈ ಹಿಂದೆ ಮನೆಗೆ ಬೀಗ ಹಾಕಿದ್ದ ಕಾರಣ ಪರಿಶೀಲನೆಗೆ ಒಳಪಡದವರು ತಮ್ಮ ಹತ್ತಿರದ ಬೆಸ್ಕಾಂ ಉಪವಿಭಾಗೀಯ ಕಚೇರಿಯನ್ನು ಸಂಪರ್ಕಿಸಬೇಕು. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್‌ ಬಿಲ್‌ ಹಾಗೂ ಬಾಡಿಗೆದಾರರಾಗಿದ್ದರೆ ಬಾಡಿಗೆ ಕರಾರು ಪತ್ರವನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ಪೂರ್ಣಗೊಳಿಸಬೇಕು.

Must Read