October 17, 2026
Saturday, October 17, 2026
spot_img

ಟೀಂ ಇಂಡಿಯಾ ಮಾಜಿ ನಾಯಕನ ದುಬೈ ಡೀಲ್‌: ಐಷಾರಾಮಿ ಮನೆ ಖರೀದಿಸಿ ಸುದ್ದಿಯಾದ ಸೂರ್ಯಕುಮಾರ್‌ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಟಿ20 ವಿಶ್ವಕಪ್‌ ವಿಜೇತ ನಾಯಕ ಸೂರ್ಯಕುಮಾರ್‌ ಯಾದವ್‌ ಇದೀಗ ದುಬೈನಲ್ಲಿ ಐಷಾರಾಮಿ ಆಸ್ತಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.

ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ದುಬೈನ ಜೀವನಶೈಲಿ, ಸುರಕ್ಷತೆ ಮತ್ತು ಆಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾರುಖ್‌ ಖಾನ್‌ ಜೊತೆಗಿನ ವಿಶೇಷ ಸಂಪರ್ಕ

ಸೂರ್ಯಕುಮಾರ್‌ ಖರೀದಿಸಿರುವ ಆಸ್ತಿಯ ಹೆಸರು ‘ಶಾರುಖ್‌ಝ್‌ ರೆಸಿಡೆನ್ಸಸ್‌’ (Shahrukhz Residences). ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಹೆಸರಿನೊಂದಿಗೆ ಸಂಪರ್ಕ ಹೊಂದಿರುವ ಈ ಕಟ್ಟಡದ ಬಗ್ಗೆ ತಿಳಿದಾಗಲೇ ಖರೀದಿಸುವ ನಿರ್ಧಾರಕ್ಕೆ ಬಂದಿದ್ದಾಗಿ ಸೂರ್ಯಕುಮಾರ್‌ ವಿಡಿಯೋದಲ್ಲಿ ಹೇಳಿದ್ದಾರೆ. ಕಟ್ಟಡದ ಒಳಾಂಗಣ ವಿನ್ಯಾಸ, ನಿರ್ಮಾಣದ ಗುಣಮಟ್ಟ, ದೀರ್ಘಕಾಲೀನ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೌಲಭ್ಯಗಳು ತಮ್ಮ ಗಮನ ಸೆಳೆದಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಈ ವಸತಿ ಸಮುಚ್ಚಯದಲ್ಲಿ ಹೈಪರ್‌ಬ್ಯಾರಿಕ್‌ ಥೆರಪಿ, ರೆಡ್‌ ಲೈಟ್‌ ಥೆರಪಿ ಮತ್ತು ಕ್ರಯೋಥೆರಪಿಯಂತಹ ಆರೋಗ್ಯ ಸಂಬಂಧಿತ ಸೌಲಭ್ಯಗಳಿವೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ರಕ್ತ ಪರೀಕ್ಷೆಯಿಲ್ಲದೆ ದೇಹದ ವಿವಿಧ ಆರೋಗ್ಯ ಸೂಚಕಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯೂ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಬೈ ಜೀವನಶೈಲಿಗೆ ಮನಸೋತ ಕ್ರಿಕೆಟಿಗ

2014ರಲ್ಲಿ ಐಪಿಎಲ್‌ ಆಡಲು ಮೊದಲ ಬಾರಿಗೆ ದುಬೈಗೆ ಭೇಟಿ ನೀಡಿದ್ದನ್ನು ಸೂರ್ಯಕುಮಾರ್‌ ನೆನಪಿಸಿಕೊಂಡಿದ್ದಾರೆ. ನಂತರ 2020ರಲ್ಲಿ ಮತ್ತೆ ಬಂದಿದ್ದಾಗಿ ಹೇಳಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತೀಯರ ದುಬೈ ಭೇಟಿ ಹೆಚ್ಚುತ್ತಿರುವುದನ್ನೂ ಪ್ರಸ್ತಾಪಿಸಿದ್ದಾರೆ. ಮುಂಬೈನಲ್ಲಿ ವಾಸಿಸುವ ತಮಗೆ ಅಲ್ಲಿನ ಸುರಕ್ಷತೆಯ ಬಗ್ಗೆ ವಿಶ್ವಾಸವಿದ್ದರೂ, ದುಬೈನಲ್ಲಿಯೂ ಸುರಕ್ಷಿತ ಮತ್ತು ನಿರಾಳ ವಾತಾವರಣ ಅನುಭವವಾಗುತ್ತದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಪತ್ನಿ ದೇವಿಶಾ ಅವರು ಮುಂಬೈನ ಚೆಂಬೂರಿನಲ್ಲಿ ಸುಮಾರು 7.18 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾಗಿ ವರದಿಯಾಗಿತ್ತು.

ಒಟ್ಟಿನಲ್ಲಿ, ಕ್ರಿಕೆಟ್‌ ಮೈದಾನದ ಸಾಧನೆಗಳ ಜೊತೆಗೆ ಸೂರ್ಯಕುಮಾರ್‌ ಯಾದವ್‌ ಅವರ ಆಸ್ತಿ ಹೂಡಿಕೆಗಳೂ ಗಮನ ಸೆಳೆಯುತ್ತಿವೆ.

https://www.instagram.com/reel/DebuZu7oqXJ/?utm_source=ig_embed&ig_rid=Ak3v4sUUzCb0Qq9xHWvsjkA

Must Read