ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ಯುಕ್ತ ಸೋಯಾ ಚಂಕ್ಸ್ ಚಿಲ್ಲಾವನ್ನು ಸೇರಿಸಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
ಸೋಯಾ ಚಂಕ್ಸ್ – 1 ಕಪ್
ಕಡಲೆ ಹಿಟ್ಟು – 3–4 ಚಮಚ
ಮೊಸರು – 2 ಚಮಚ
ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
ಟೊಮೆಟೊ – 1, ಸಣ್ಣಗೆ ಹೆಚ್ಚಿದ್ದು
ಹಸಿರು ಮೆಣಸಿನಕಾಯಿ – 1–2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಅರಿಶಿನ – ಕಾಲು ಚಮಚ
ಗರಂ ಮಸಾಲಾ ಮತ್ತು ಖಾರದ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಬೇಯಿಸಲು ಸ್ವಲ್ಪ
ತಯಾರಿಸುವ ವಿಧಾನ
ಸೋಯಾ ಚಂಕ್ಸ್ಗಳನ್ನು ಬಿಸಿ ನೀರಿನಲ್ಲಿ 10–15 ನಿಮಿಷ ನೆನೆಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಹಿಂಡಿ ತೆಗೆದುಬಿಡಿ.
ನೀರು ತೆಗೆದ ಸೋಯಾ ಚಂಕ್ಸ್ಗಳನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಒಂದು ಪಾತ್ರೆಯಲ್ಲಿ ರುಬ್ಬಿದ ಸೋಯಾ, ಕಡಲೆ ಹಿಟ್ಟು, ಮೊಸರು, ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ಜೀರಿಗೆ ಪುಡಿ, ಅರಿಶಿನ, ಗರಂ ಮಸಾಲಾ, ಖಾರದ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ಕೊಂಚ ಗಟ್ಟಿಯಾದ ಹದಕ್ಕೆ ತಯಾರಿಸಿಕೊಳ್ಳಿ.
ತವಾವನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ. ಮಿಶ್ರಣವನ್ನು ಹಾಕಿ ದೋಸೆಯಂತೆ ಹರಡಿ.
ಮಧ್ಯಮ ಉರಿಯಲ್ಲಿ ಎರಡೂ ಬದಿಗಳನ್ನು ಹೊಂಬಣ್ಣ ಬರುವವರೆಗೆ ಬೇಯಿಸಿ.
ಇದರ ಆರೋಗ್ಯ ಲಾಭಗಳೇನು ಗೊತ್ತಾ?
ಸೋಯಾ ಚಂಕ್ಸ್ನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ದೇಹದ ಸ್ನಾಯುಗಳ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಪ್ರೋಟೀನ್ ಮತ್ತು ನಾರಿನಾಂಶ ಹೊಟ್ಟೆ ತುಂಬಿದ ಅನುಭವವ ನೀಡುವುದರಿಂದ ತಿನ್ನುವ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
ಸೋಯಾ, ಕಡಲೆ ಹಿಟ್ಟು ಮತ್ತು ತರಕಾರಿಗಳ ಸಂಯೋಜನೆಯಿಂದ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಹಾಗೂ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ದಿನದ ಆರಂಭಕ್ಕೆ ಪೌಷ್ಟಿಕ ಉಪಹಾರ ಸಿಗುತ್ತದೆ.



