October 18, 2026
Sunday, October 18, 2026
spot_img

ವಿಜಯಪುರ: ಹೊಲದಲ್ಲಿ ಬೆಳೆದಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ, ಆರೋಪಿ ಅರೆಸ್ಟ್

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಹೊಲವೊಂದರಲ್ಲಿ ಬೆಳೆಯಲಾಗಿದ್ದ 1 ಕೋಟಿ ರೂ.ಗೂ ಅಧಿಕ ಮೌಲ್ಯದ 200 ಕೆಜಿಗೂ ಹೆಚ್ಚಿನ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದ್ದು, ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಿವಶಂಕರ ಶರಣಪ್ಪ ಜೀರ್ ಬಂಧಿತ ಆರೋಪಿಯಾಗಿದ್ದು, ಈ ಆರೋಪಿ ತನ್ನ ಹೊಲದಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿ ಅದರ ಮಧ್ಯದಲ್ಲಿ 500 ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಬೆಳೆದಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 500 ಕ್ಕಿಂತಲೂ ಹೆಚ್ಚು ಗಾಂಜಾ ಗಿಡಗಳನ್ನು ಬೆಳೆಸಿದ್ದು ಕಂಡು ಬಂದಿದೆ. 1.1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡು, ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ದಿಂಡವಾರ ಗ್ರಾಮದಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಬೀಟ್ ಪೊಲೀಸ್ ಸಿಬ್ಬಂದಿಗೆ ಸ್ವೀಕೃತವಾಗಿತ್ತು, ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. 

ಈ ಪ್ರಕರಣವನ್ನು ಭೇದಿಸುವ ನಿಟ್ಟಿನಲ್ಲಿ ಬಸವನಬಾಗೇವಾಡಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಗುರುಶಾಂತ ದಾಶ್ಯಾಳ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿದ್ದು, ಈ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಬಹುಮಾನವನ್ನು ಘೋಷಿಸಲಾಗಿದೆ ಎಂದರು.

ಇದನ್ನೂ ಓದಿ:

ಮಾದಕ ದ್ರವ್ಯಗಳ ಮಾರಾಟ ಜಾಲವನ್ನೇ ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಂಭೀರವಾದ ಹೆಜ್ಜೆ ಇರಿಸುತ್ತದೆ, ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಟ್ ಮಟ್ಟದಲ್ಲಿಯೂ ಬೀಟ್ ಸಿಬ್ಬಂದಿಗಳ ಮೂಲಕ ಮಾದಕ ದ್ರವ್ಯಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ.  ವಿಜಯಪುರ ಜಿಲ್ಲೆಯಲ್ಲಿ ಮಾದಕ ವಸ್ತುಗಳ ತಯಾರಿಕೆ, ಮಾರಾಟ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರ ಬಳಿ ಮಾಹಿತಿ ಇದ್ದರೆ ಅದನ್ನು ಇಲಾಖೆಗೆ ಒದಗಿಸಬೇಕು, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು, ಯೋಗ್ಯ ಬಹುಮಾನ ಸಹ ಇಲಾಖೆ ನೀಡಲಿದೆ ಎಂದರು.

ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Must Read