October 18, 2026
Sunday, October 18, 2026
spot_img

8 ಗಂಟೆ ನಿದ್ರೆಯ ನಂತರವೂ ತಲೆನೋವೇ ಈ ತಪ್ಪುಗಳೇ ನಿಮ್ಮ ಬೆಳಗಿನ ಪ್ರಶಾಂತತೆ ಕೆಡಿಸುತ್ತಿವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ‘ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲ, ಅದಕ್ಕೆ ತಲೆನೋವು ಬಂದಿದೆ’ ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಆದರೆ, ದಿನವೂ 7 ರಿಂದ 8 ಗಂಟೆಗಳ ಕಾಲ ಸುಖವಾಗಿ ನಿದ್ರಿಸಿದರೂ ಬೆಳಿಗ್ಗೆ ಎದ್ದ ತಕ್ಷಣ ತಲೆ ಭಾರವಾಗುವುದು ಅಥವಾ ತಲೆನೋವು ಕಾಣಿಸಿಕೊಳ್ಳುವುದು ಹಲವರನ್ನು ಕಾಡುವ ದೊಡ್ಡ ಸಮಸ್ಯೆ. ನಿದ್ರೆ ಪೂರ್ತಿಯಾಗಿದ್ದರೂ ಬೆಳಗಿನ ಜಾವವೇ ಈ ತಲೆನೋವು ಏಕೆ ಬರುತ್ತದೆ?

ನಾವು ರಾತ್ರಿ ನಿದ್ರಿಸುವಾಗ 7-8 ಗಂಟೆಗಳ ಕಾಲ ನೀರು ಕುಡಿಯುವುದಿಲ್ಲ. ನಿದ್ರೆಯಲ್ಲಿ ಉಸಿರಾಟ ಹಾಗೂ ಬೆವರಿನ ಮೂಲಕ ದೇಹದ ನೀರು ಆವಿಯಾಗುತ್ತದೆ. ಬೆಳಿಗ್ಗೆ ಏಳುವಷ್ಟರಲ್ಲಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರಕ್ತಸಂಚಾರದಲ್ಲಿ ವ್ಯತ್ಯಾಸವಾಗುತ್ತದೆ. ಇದು ತಲೆಯ ನರಗಳ ಮೇಲೆ ಒತ್ತಡ ಹೇರಿ ತಲೆನೋವಿಗೆ ಕಾರಣವಾಗುತ್ತದೆ.

ನಿಮಗೆ ತಿಳಿಯದಂತೆ ನಿದ್ರೆಯಲ್ಲಿ ಗೊರಕೆ ಹೊಡೆಯುವುದು ಅಥವಾ ಕೆಲ ಸೆಕೆಂಡುಗಳ ಕಾಲ ಉಸಿರಾಟ ನಿಲ್ಲುವುದು ಅತ್ಯಂತ ಅಪಾಯಕಾರಿ. ಇದರಿಂದ ದೇಹ ಹಾಗೂ ಮೆದುಳಿಗೆ ತಲುಪುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಮೆದುಳಿಗೆ ರಕ್ತ ಪೂರೈಕೆ ವ್ಯತ್ಯಾಸವಾದಾಗ ಬೆಳಿಗ್ಗೆ ತಲೆನೋವಿನೊಂದಿಗೆ ಎಚ್ಚರವಾಗುತ್ತದೆ.

ಹಲವರಿಗೆ ನಿದ್ರೆಯಲ್ಲಿ ತಮ್ಮ ಅರಿವಿಲ್ಲದೆಯೇ ಮೇಲಿನ ಮತ್ತು ಕೆಳಗಿನ ದವಡೆ ಹಲ್ಲುಗಳನ್ನು ಗಟ್ಟಿಯಾಗಿ ಕಡಿಯುವ ಅಥವಾ ಉಜ್ಜುವ ಅಭ್ಯಾಸವಿರುತ್ತದೆ. ಇದರಿಂದ ದವಡೆಯ ಸ್ನಾಯುಗಳು ಹಾಗೂ ತಲೆಯ ಪಕ್ಕದ ನರಗಳ ಮೇಲೆ ವಿಪರೀತ ಒತ್ತಡ ಬಿದ್ದು, ಬೆಳಿಗ್ಗೆ ಏಳುತ್ತಿದ್ದಂತೆ ಮುಖ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ದಿನವಿಡೀ ವಿಪರೀತ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದು, ರಾತ್ರಿ ಹನ್ನೆರಡು ಗಂಟೆಗಳ ಕಾಲ ಕೆಫೀನ್ ಸಿಗದಿದ್ದಾಗ ದೇಹವು ‘ಕೆಫೀನ್ ವಿತ್‌ಡ್ರಾಯಲ್’ ಹಂತಕ್ಕೆ ತಲುಪುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಮೆದುಳಿನ ನರಗಳು ಕೆಫೀನ್‌ಗಾಗಿ ಹಂಬಲಿಸುವುದರಿಂದ ತಲೆನೋವು ಪ್ರಾರಂಭವಾಗುತ್ತದೆ.

ತುಂಬಾ ದಪ್ಪನೆಯ ದಿಂಬು ಬಳಸುವುದು ಅಥವಾ ಕುತ್ತಿಗೆಯನ್ನು ವಕ್ರವಾಗಿಟ್ಟು ಮಲಗುವುದರಿಂದ ಕುತ್ತಿಗೆಯ ನರಗಳು ಮತ್ತು ಬೆನ್ನುಮೂಳೆಯ ಮೇಲೆ ಒತ್ತಡ ಬೀಳುತ್ತದೆ. ಈ ಒತ್ತಡವು ಬೆಳಿಗ್ಗೆ ತಲೆಯ ಹಿಂಭಾಗದಲ್ಲಿ ನೋವಾಗಿ ಪರಿಣಮಿಸುತ್ತದೆ.

ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಅಭ್ಯಾಸಗಳಿಂದ ಈ ಬೆಳಗಿನ ತಲೆನೋವಿಗೆ ಸುಲಭವಾಗಿ ಮುಕ್ತಿ ಹಾಡಬಹುದು.

Must Read