ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ತೀವ್ರ ಆಘಾತ ನೀಡಿದೆ. ಮೊದಲು ‘ಭಾರತ ತೊರೆಯುವಂತೆ’ ನೀಡಿದ್ದ ಆದೇಶದ ಬೆನ್ನಲ್ಲೇ, ಇದೀಗ ಅವರ ಭಾರತದ ವಿದೇಶಿ ಪೌರತ್ವ (OCI) ಕಾರ್ಡ್ ಅನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿ ಎರಡನೇ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಇತ್ತೀಚೆಗೆ ಸಿಜೆಪಿ ಸಂಘಟನೆಯು ದೆಹಲಿಯಲ್ಲಿ ನಡೆಸುತ್ತಿರುವ ಸಿಇಸಿ ವಿರೋಧಿ ಚಳವಳಿಗೆ ಬೆಂಬಲ ಸೂಚಿಸಿ, ಮುಂಬೈನಲ್ಲಿ ಯಾವುದೇ ಪೋಲಿಸ್ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಲಾಗಿತ್ತು. ಈ ಅಕ್ರಮ ಸಭೆಯಲ್ಲಿ ನಟ ಇಮ್ರಾನ್ ಖಾನ್ ಭಾಗವಹಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ಸಂಸದರೊಬ್ಬರು ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಇಮ್ರಾನ್ ಅವರನ್ನು ತಾತ್ಕಾಲಿಕವಾಗಿ ಬಂಧಿಸಿದ್ದರು. ಇದರ ಬೆನ್ನಲ್ಲೇ ಅಕ್ಟೋಬರ್ 14 ರಂದು ಎಫ್ಆರ್ಆರ್ಒ ಇಮ್ರಾನ್ಗೆ ತಕ್ಷಣವೇ ಭಾರತವನ್ನು ತೊರೆಯುವಂತೆ ಮೊದಲ ನೋಟೀಸ್ ನೀಡಿತು.
ಪೊಲೀಸರು ನೀಡಿದ ‘ಭಾರತ ತೊರೆಯುವ’ ಆದೇಶವನ್ನು ಪ್ರಶ್ನಿಸಿ ನಟ ಇಮ್ರಾನ್ ಖಾನ್ ಶನಿವಾರದಂದು ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಸೂಕ್ತ ವಿಚಾರಣೆ ನಡೆಸದೆ ಮತ್ತು ತಮ್ಮ ಕಡೆಯ ವಾದವನ್ನು ಆಲಿಸದೆ ಏಕಾಏಕಿ ಈ ರೀತಿಯ ನೋಟೀಸ್ ನೀಡುವುದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಭಾನುವಾರ ಎಫ್ಆರ್ಆರ್ಒ ಸಂಸ್ಥೆಯು ಇಮ್ರಾನ್ಗೆ ಮತ್ತೊಂದು ಆಘಾತ ನೀಡಿದೆ. ಪೌರತ್ವ ಕಾಯ್ದೆ, 1955 ರ ಪ್ರಕಾರ, ಅವರ ಓಸಿಐ ಸ್ಥಾನಮಾನವನ್ನು ಏಕೆ ರದ್ದುಪಡಿಸಬಾರದು ಎಂದು ಪ್ರಶ್ನಿಸಿ 15 ದಿನಗಳ ಒಳಗೆ ಉತ್ತರ ನೀಡುವಂತೆ ಶೋಕಾಸ್ ನೋಟೀಸ್ ಜಾರಿಗೊಳಿಸಿದೆ.
ಆದಾಗ್ಯೂ, ಕೇವಲ ಎಫ್ಐಆರ್ ದಾಖಲಾದ ತಕ್ಷಣ ಅಥವಾ ಪೊಲೀಸ್ ಬಂಧನವಾದ ಮಾತ್ರಕ್ಕೆ ಯಾವುದೇ ಆರೋಪಗಳು ಅಂತಿಮವಾಗಿ ಸಾಬೀತಾಗುವುದಿಲ್ಲ. ಅದೇ ರೀತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಂದೇ ಕಾರಣಕ್ಕೆ ಓಸಿಐ ರದ್ದುಪಡಿಸಲು ಬರುವುದಿಲ್ಲ ಎಂದು ಸ್ವತಃ ಎಫ್ಆರ್ಆರ್ಒ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇಮ್ರಾನ್ ಖಾನ್ ಅವರಿಗೆ ತಮ್ಮ ವಾದ ಮಂಡಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಪ್ರಕರಣವು ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.



