October 18, 2026
Sunday, October 18, 2026
spot_img

ನಾಡಿನೆಲ್ಲಡೆ ಆಯುಧ ಪೂಜೆ ಸಡಗರ: ಮೈಸೂರಿನಲ್ಲಿ ಗಗನಕ್ಕೇರಿದ ಹೂವು, ಬೂದುಗುಂಬಳಕಾಯಿ ಬೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಡಹಬ್ಬ ದಸರಾ ಸಂಭ್ರಮದ ನಡುವೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆ ಹಬ್ಬದ ಕಳೆ ಗರಿಗೆದರಿದೆ. ಭಾನುವಾರ ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆ ಬದಿಯ ತಾತ್ಕಾಲಿಕ ಅಂಗಡಿಗಳಲ್ಲಿ ಸಾರ್ವಜನಿಕರ ಖರೀದಿ ಜೋರಾಗಿದೆ. ಹಬ್ಬಕ್ಕೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿಗೆ ಜನಜಂಗುಳಿ ಕಂಡುಬರುತ್ತಿದ್ದು, ವ್ಯಾಪಾರಸ್ಥರ ಮುಖದಲ್ಲಿ ಹರ್ಷ ಮೂಡಿಸಿದೆ.

ಬೂದುಗುಂಬಳಕಾಯಿಗೆ ಭಾರೀ ಡಿಮ್ಯಾಂಡ್

ಆಯುಧ ಪೂಜೆಯ ದಿನದಂದು ವಾಹನಗಳು, ಕಚೇರಿಗಳು ಹಾಗೂ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ, ಕೆಟ್ಟ ದೃಷ್ಟಿ ನಿವಾರಣೆಗಾಗಿ ಬೂದುಗುಂಬಳಕಾಯಿ ಒಡೆಯುವುದು ಅನಾದಿಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಹೀಗಾಗಿ ಮಾರುಕಟ್ಟೆಯಲ್ಲಿ ಸದ್ಯ ಬೂದುಗುಂಬಳಕಾಯಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬೂದುಗುಂಬಳಕಾಯಿಗೆ 25 ರೂ. ನಿಗದಿಯಾಗಿದೆ. ಅಂಗಡಿಗಳು ಹಾಗೂ ವಾಹನಗಳ ಮಾಲೀಕರು ಮುಗಿಬಿದ್ದು ಕುಂಬಳಕಾಯಿ ಖರೀದಿಸುತ್ತಿದ್ದಾರೆ.

ಗಗನಕ್ಕೇರಿದ ಸೇವಂತಿಗೆ ಹೂವಿನ ಬೆಲೆ

ಹಬ್ಬದ ಅಲಂಕಾರದಲ್ಲಿ ಪ್ರಮುಖ ಪಾತ್ರ ವಹಿಸುವ ಹೂವುಗಳ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಸೇವಂತಿಗೆ ಹೂವಿನ ದರ ಕೆ.ಜಿ.ಗೆ ಸುಮಾರು 200ಕ್ಕೆ ಏರಿಕೆಯಾಗಿದೆ. ಬೆಲೆ ಕೊಂಚ ದುಬಾರಿಯಾಗಿದ್ದರೂ ಹಬ್ಬದ ಸಡಗರಕ್ಕೆ ಕೊರತೆ ಮಾಡಬಾರದೆಂದು ಗ್ರಾಹಕರು ವಾಹನ ಹಾಗೂ ಮನೆಗಳನ್ನು ಅಲಂಕರಿಸಲು ಹೂವುಗಳನ್ನು ಖರೀದಿಸುತ್ತಿದ್ದಾರೆ.

ಇದನ್ನೂ ಓದಿ:

ಕಳೆಗಟ್ಟಿದ ಹಬ್ಬದ ವಾತಾವರಣ

ಬೆಳಗ್ಗೆಯಿಂದಲೇ ಮೈಸೂರಿನ ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಾವಿನ ಎಲೆ, ಬಾಳೆಕಂದು, ನಿಂಬೆಹಣ್ಣು ಹಾಗೂ ಕಪೂ೯ರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿದೆ. ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ವ್ಯಾಪಾರ ಇನ್ನೂ ಚುರುಕುಗೊಳ್ಳಲಿದ್ದು, ಇಷ್ಟು ದಿನ ಮಂದಗತಿಯಲ್ಲಿದ್ದ ವ್ಯಾಪಾರಕ್ಕೆ ಈಗ ಜೀವ ಬಂದಂತಾಗಿದೆ ಎಂದು ಸ್ಥಳೀಯ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Must Read