October 18, 2026
Sunday, October 18, 2026
spot_img

ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈನ ಜುಹುನಲ್ಲಿ ಭಾನುವಾರ ಭೀಕರ ಘಟನೆಯೊಂದು ಸಂಭವಿಸಿದೆ. ಬಾಲಿವುಡ್‌ನ ಖ್ಯಾತ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ಮಾಡಿದ್ದಾರೆ. ಈ ಶೂಟೌಟ್‌ನಿಂದ ಇಡೀ ಮುಂಬೈ ಚಿತ್ರರಂಗವೇ ಬೆಚ್ಚಿಬಿದ್ದಿದ್ದು, ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮ ಮುಗಿಸಿ ಹೊರಬರುವಾಗ ನಡೆದ ಸಂಚು

ಡಿಸಿಪಿ ಮೋಹಿತ್ ಗಾರ್ಗ್ ನೀಡಿರುವ ಮಾಹಿತಿಯ ಪ್ರಕಾರ, ಟೈಗರ್ ಶ್ರಾಫ್ ಅವರು ಜುಹು ಭಾಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿ ತಮ್ಮ ಕಾರಿನಲ್ಲಿ ಹೊರಡುತ್ತಿದ್ದಾಗ ಈ ದಾಳಿ ನಡೆದಿದೆ. ಹೊಂಚು ಹಾಕಿ ಕುಳಿತಿದ್ದ ಅಪರಿಚಿತ ವ್ಯಕ್ತಿಗಳು ದಿಢೀರನೆ ಕಾರಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ದಾಳಿಯ ತೀವ್ರತೆಗೆ ನಟನ ಜೊತೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಖಡಕ್ ಆ್ಯಕ್ಷನ್

ಘಟನೆ ತಿಳಿಯುತ್ತಿದ್ದಂತೆಯೇ ಮಹಾರಾಷ್ಟ್ರ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಕ್ಷಣವೇ ಮುಂಬೈ ಪೊಲೀಸ್ ಕಮಿಷನರ್‌ಗೆ ಕರೆ ಮಾಡಿ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಮತ್ತು ಆರೋಪಿಗಳನ್ನು ಪತ್ತೆಹಚ್ಚಲು ಖಡಕ್ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲದೆ, ಖುದ್ದಾಗಿ ನಟ ಟೈಗರ್ ಶ್ರಾಫ್ ಅವರಿಗೆ ಕರೆ ಮಾಡಿರುವ ಸಿಎಂ ಫಡ್ನವಿಸ್, ಧೈರ್ಯವಾಗಿರಿ, ನಿಮ್ಮ ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ದಾಳಿ ನಡೆಸಿ ಜಾರಿಕೊಂಡಿರುವ ಕಿಡಿಗೇಡಿಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪತ್ತೆ ಹಚ್ಚಿ ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.

ಚಿತ್ರರಂಗದಲ್ಲಿ ಆತಂಕ

ಪ್ರಸ್ತುತ ಜುಹು ಪೊಲೀಸರು ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇತ್ತೀಚೆಗಷ್ಟೇ ಹರ್ಷ ನಿರ್ದೇಶನದ, ಸಂಜಯ್ ದತ್ ಜೊತೆಗಿನ ‘ಬಾಗಿ 4’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಟೈಗರ್ ಶ್ರಾಫ್ ಮೇಲಿನ ಈ ದಾಳಿ ಬಾಲಿವುಡ್‌ನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹಬ್ಬದ ದಿನಗಳಲ್ಲೇ ಇಂತಹದೊಂದು ಘಟನೆ ನಡೆದಿರುವುದು ಮುಂಬೈ ಸಾರ್ವಜನಿಕ ವಲಯದಲ್ಲೂ ಭೀತಿ ಮೂಡಿಸಿದೆ.

Must Read

Skip to toolbar