ಹೊಸದಿಗಂತ ಡಿಜಿಟಲ್ ಡಸ್ಕ್:
ಕೌಟುಂಬಿಕ ಜಗಳ ಹಾಗೂ ಪತ್ನಿಯ ಕಡೆಯವರಿಂದ ಎದುರಾದ ಮಾನಸಿಕ ಕಿರುಕುಳಕ್ಕೆ ಬೇಸತ್ತು ಗುಜರಾತ್ ಮೂಲದ ಅಂಚೆ ಇಲಾಖೆ ಉದ್ಯೋಗಿಯೊಬ್ಬರು ಮಹಾರಾಷ್ಟ್ರದ ಹರಿಶ್ಚಂದ್ರಗಡದ ಕೊಂಕಣಕಡ ಎಂಬ 1,700 ಅಡಿ ಆಳದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 12 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೂ ಮುನ್ನ ಆ ವ್ಯಕ್ತಿ ರೆಕಾರ್ಡ್ ಮಾಡಿರುವ 13 ನಿಮಿಷಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ
ಕಣಿವೆಯ ಅಂಚಿನಲ್ಲಿ ಸಿಕ್ಕ ಬೈಕ್, ಫೋನ್
ಮೃತ ದುರ್ದೈವಿಯನ್ನು ಗುಜರಾತ್ನ ಭಾವನಗರ ನಿವಾಸಿ ವಿಶ್ವರಾಜ್ ಗೋಹಿಲ್ ಎಂದು ಗುರುತಿಸಲಾಗಿದೆ. ಥಾಣೆ, ಪುಣೆ ಹಾಗೂ ಅಹಿಲ್ಯಾನಗರ ಜಿಲ್ಲೆಗಳ ಗಡಿಯಲ್ಲಿರುವ ಹರಿಶ್ಚಂದ್ರಗಡ ಕೋಟೆಯ ಪ್ರಸಿದ್ಧ ಕೊಂಕಣಕಡ ಕಣಿವೆಯ ಸಮೀಪ ಅಪರಿಚಿತ ಬೈಕ್ ಮತ್ತು ಮೊಬೈಲ್ ಫೋನ್ ಪತ್ತೆಯಾದಾಗ ಸಾರ್ವಜನಿಕರು ರಾಜೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೊಬೈಲ್ ಮೂಲಕ ಕುಟುಂಬಸ್ಥರನ್ನು ಸಂಪರ್ಕಿಸಿದಾಗ, ವಿಶ್ವರಾಜ್ ಸಾವಿಗೆ ಮುನ್ನ ತಮಗೆ ಕಳುಹಿಸಿದ್ದ ವಿಡಿಯೋ ಸಂದೇಶದ ಸತ್ಯಾಂಶ ಬಯಲಾಗಿದೆ.
ಡ್ರೋನ್ ಕ್ಯಾಮೆರಾ, ಪರ್ವತಾರೋಹಿಗಳ ಮೂಲಕ ಪತ್ತೆ
ಪ್ರಪಾತವು ಆಳವಾಗಿದ್ದರಿಂದ ಶವವನ್ನು ಪತ್ತೆಹಚ್ಚಲು ಪೊಲೀಸರು ಡ್ರೋನ್ ಕ್ಯಾಮೆರಾಗಳ ನೆರವು ಪಡೆದರು. ತದನಂತರ ಸ್ಥಳೀಯ ಪರ್ವತಾರೋಹಿಗಳ ಸಹಾಯದಿಂದ ಸತತ 24 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಕಳೆದ ಶುಕ್ರವಾರ ವಿಶ್ವರಾಜ್ ಅವರ ಮೃತದೇಹವನ್ನು ಮೇಲಕ್ಕೆತ್ತಿ, ಗುಜರಾತ್ನ ಭಾವನಗರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳವು ಥಾಣೆ ಗ್ರಾಮಾಂತರ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ತೋಟವಾಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
13 ನಿಮಿಷಗಳ ವೀಡಿಯೋದಲ್ಲೇನಿದೆ?
ವಿಶ್ವರಾಜ್ ಗೋಹಿಲ್ ಅವರು 2026ರ ಫೆಬ್ರವರಿ 8 ರಂದು ಧಾರಾಬಾ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ ಸೆಪ್ಟೆಂಬರ್ 12 ರಂದು ಪತ್ನಿಯು ಇವರ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು. ಅಕ್ಟೋಬರ್ 9 ರಂದು ನ್ಯಾಯಾಲಯಕ್ಕೂ ಹಾಜರಾಗಿದ್ದ ವಿಶ್ವರಾಜ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ತಮ್ಮ ಕೊನೆಯ ವೀಡಿಯೋದಲ್ಲಿ ಮಾತನಾಡಿರುವ ಅವರು, “ನನ್ನ ಪತ್ನಿ ಮತ್ತು ಆಕೆಯ ಮನೆಯವರು ನನ್ನ ಹಾಗೂ ನನ್ನ ಇಡೀ ಕುಟುಂಬದ ಮೇಲೆ ಸುಳ್ಳು ಕೌಟುಂಬಿಕ ದೌರ್ಜನ್ಯದ ಕೇಸ್ ಹಾಕಿ ಚಿತ್ರಹಿಂಸೆ ನೀಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ದೇಶದಲ್ಲಿರುವ ಕೌಟುಂಬಿಕ ದೌರ್ಜನ್ಯ ಹಾಗೂ ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಸರ್ಕಾರವು ತಕ್ಷಣವೇ ಈ ಕಾಯ್ದೆಗಳನ್ನು ಪರಿಶೀಲಿಸಿ ಸೂಕ್ತ ತಿದ್ದುಪಡಿ ತರಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ತೋಟವಾಡೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಶೀತಲ್ಕುಮಾರ್ ನಾಯ್ಕ್ ಪ್ರತಿಕ್ರಿಯಿಸಿದ್ದು, “ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮೃತರ ಕೊನೆಯ ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕುಟುಂಬದ ಸದಸ್ಯರ ಹೇಳಿಕೆಗಳನ್ನು ಪಡೆದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.



