October 20, 2026
Tuesday, October 20, 2026
spot_img

ಮೈಸೂರು ದಸರಾ: ಅರಮನೆಯಲ್ಲಿ ಮಹಾನವಮಿ ಆಚರಣೆ, ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವ 2026 ರ ಸಂಭ್ರಮ ಕಳೆಕಟ್ಟಿದೆ, ಮೈಸೂರು ಅರಮನೆಯಲ್ಲಿ ಇಂದು ಮಹಾನವಮಿ ಆಚರಣೆಗಳು ಶಾಸ್ತ್ರೋಕ್ತವಾಗಿ ಜರುಗಿವೆ. ಆಯುಧ ಪೂಜೆ ಮತ್ತು ಮಹಾನವಮಿ ಅಂಗವಾಗಿ ಅರಮನೆಯ ಪಟ್ಟದ ಆನೆ ‘ಶ್ರೀಕಂಠ’, ನಿಶಾನೆ ಕುದುರೆ ‘ಏಕಲವ್ಯ’ ಹಾಗೂ ರಾಜವಂಶಸ್ಥರ ಆಯುಧಗಳನ್ನು ಕೋಟೆ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ದು, ರಾಜಮನೆತನದ ಸದಸ್ಯರು ಮತ್ತು ಅರಮನೆ ಸಿಬ್ಬಂದಿಯ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಾಳೆ ಜಂಬೂ ಸವಾರಿ ಸಂಭ್ರಮ

ಕಳೆದ ಅ. 11 ರಂದು ಚಾಲನೆ ಪಡೆದ 11 ದಿನಗಳ ಈ ಐತಿಹಾಸಿಕ ದಸರಾ ಉತ್ಸವವು, ನಾಳೆ ಬುಧವಾರ ವಿಜಯದಶಮಿಯ ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಇಡೀ ಮೈಸೂರು ನಗರವು ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತುಪ್ರದರ್ಶನ ಹಾಗೂ ವಾಯುಪಡೆಯ ಏರ್ ಶೋಗಳ ಮೂಲಕ ಹಬ್ಬದ ಕಳೆ ಕಟ್ಟಿದೆ.

400 ವರ್ಷಗಳ ಭವ್ಯ ಇತಿಹಾಸ

ಕ್ರಿ.ಶ. 1610 ರಲ್ಲಿ ರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಆರಂಭವಾದ ಈ ಮೈಸೂರು ದಸರಾ ಮಹೋತ್ಸವಕ್ಕೆ 400 ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸವಿದೆ. ಚಾಮುಂಡೇಶ್ವರಿ ದೇವಿಯು ಮಹಿಷಾಸುರನನ್ನು ಸಂಹರಿಸಿ ವಿಜಯ ಸಾಧಿಸಿದ ನೆನಪಿಗಾಗಿ ಈ ವಿಜಯದಶಮಿ ಉತ್ಸವವನ್ನು ಕರ್ನಾಟಕದ ರಾಜ್ಯ ಹಬ್ಬವಾಗಿ ಅತ್ಯಂತ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಡಿ.ಕೆ. ಶಿವಕುಮಾರ್ ಆತ್ಮೀಯ ಆಹ್ವಾನ

ನಾಡಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಸ್ತ ಕನ್ನಡಿಗರಿಗೆ ಹಾಗೂ ದೇಶ-ವಿದೇಶಗಳ ಪ್ರವಾಸಿಗರಿಗೆ ಮೈಸೂರು ದಸರಾ ವೀಕ್ಷಿಸಲು ಆತ್ಮೀಯ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ:

ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಸಿಎಂ, “ಮೈಸೂರು ದಸರಾ… ಕರುನಾಡಿನ ಹೆಮ್ಮೆ, ಕನ್ನಡಿಗರ ಸಂಭ್ರಮ. ನಮ್ಮ ಮಣ್ಣಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ವೈಭವದ ಸಂಗಮವಾಗಿರುವ ನಾಡಹಬ್ಬ ಮೈಸೂರು ದಸರಾಗೆ ಎಲ್ಲರಿಗೂ ಸ್ವಾಗತ. ಐತಿಹಾಸಿಕ ಜಂಬೂಸವಾರಿಯ ಗಾಂಭೀರ್ಯದಿಂದ ಜಾನಪದ ಕಲೆಯ ಸೊಗಡಿನವರೆಗೆ ಮೈಸೂರಿನ ಪ್ರತಿಯೊಂದು ಹೆಜ್ಜೆಯಲ್ಲೂ ಸಂಭ್ರಮವೇ ಮನೆ ಮಾಡಿದೆ. ಈ ವೈಭವವನ್ನು ಕಣ್ತುಂಬಿಕೊಳ್ಳಿ” ಎಂದು ಕರೆ ನೀಡಿದ್ದಾರೆ.

Must Read