ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದ್ದು, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಿದ ಘಟನೆ ನಡೆದಿದೆ. ಇಂದು ದೇಶಾದ್ಯಂತ ವಿಜಯದಶಮಿಯ ಸಡಗರವಿದ್ದು, ಶಿವಮೊಗ್ಗದಲ್ಲೂ ಅದ್ಧೂರಿಯಾಗಿ ಜಂಬೂ ಸವಾರಿ ಆಯೋಜಿಸಲಾಗಿತ್ತು. ಆದರೆ ಮೆರವಣಿಗೆಯ ಮಧ್ಯೆ ಆನೆ ಸೋಮಣ್ಣ ದಿಢೀರನೆ ನಿಯಂತ್ರಣ ತಪ್ಪಿ ಆರ್ಭಟಿಸಿದ್ದರಿಂದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು.
ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ
ಇದೇ ಮೊದಲ ಬಾರಿಗೆ ಸೋಮಣ್ಣ ಆನೆಗೆ ಬೆಳ್ಳಿಯ ಅಂಬಾರಿ ಹೊರಸಲಾಗಿತ್ತು. ಇದಕ್ಕೆ ಸಾಥ್ ನೀಡಲು ಸಾಗರ್ ಮತ್ತು ಬಹದ್ದೂರ್ ಆನೆಗಳು ಜೊತೆಯಲ್ಲಿದ್ದವು. ಶಾಸಕ ಚನ್ನಬಸಪ್ಪ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಅಧಿಕೃತ ಚಾಲನೆ ನೀಡಿದ್ದರು.
ಜನರನ್ನು ಕಂಡು ಬೆದರಿದ ಆನೆ
ಕೋಟೆ ಶಿವಪ್ಪನಾಯಕ ಅರಮನೆಯಿಂದ ಹೊರಟ ಮೆರವಣಿಗೆಯು ಕೋಟೆ ಶ್ರೀ ಸೀತಾರಾಮಂಜನೇಯ ದೇವಸ್ಥಾನ ದಾಟುತ್ತಿದ್ದಂತೆ, ಅಲ್ಲಿ ನೆರೆದಿದ್ದ ಭಾರೀ ಜನಸಂಖ್ಯೆಯನ್ನು ಕಂಡು ಸೋಮಣ್ಣ ಆನೆ ಬೆದರಿದೆ. ನಿಯಂತ್ರಣ ತಪ್ಪಿದ ಆನೆ ವಾಸವಿ ಶಾಲೆಯ ಕಡೆಗೆ ದೌಡಾಯಿಸಿದ್ದು, ಈ ವೇಳೆ ಅದರ ಆರ್ಭಟಕ್ಕೆ ಸಿಲುಕಿ ಅಲ್ಲಿದ್ದ ಕಾರೊಂದು ಜಖಂ ಆಗಿದೆ. ಆನೆ ತಮಗೇ ಎಲ್ಲಿ ನುಗ್ಗುತ್ತದೋ ಎಂಬ ಭೀತಿಯಿಂದ ಜನರು ಜೀವಭಯದಲ್ಲಿ ಆಕಡೆ ಈಕಡೆ ಓಡಿದ್ದಾರೆ.
ಇದನ್ನೂ ಓದಿ:
ಆನೆ ಬೆದರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಮಾವುತರು, ಕಾವಾಡಿಗರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಸಮಾಧಾನಪಡಿಸಿ, ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.



