October 21, 2026
Wednesday, October 21, 2026
spot_img

ಕಬ್ಬಿನ ದರ ನಿಗದಿ: ಅ.26ರಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಸಾಧ್ಯತೆ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ನಡುವೆಯೇ, ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ರೈತ ಮುಖಂಡ ಚೂನ್ನಪ್ಪ ಪೂಜಾತಿ ತಿಳಿಸಿದ್ದಾರೆ.

ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪಾಲ್ಗೊಳ್ಳಲಿದ್ದಾರೆ.

ಕಬ್ಬಿನ ದರ ನಿಗದಿ ವಿಚಾರವಾಗಿ ರೈತರು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಸರ್ಕಾರದ ಸಭೆ ಮಹತ್ವ ಪಡೆದುಕೊಂಡಿದೆ. ಕಿತ್ತೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದಸರಾ ಬಳಿಕ ರೈತರು ಹಾಗೂ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು.

ಕಾರ್ಖಾನೆಗಳ ಆರಂಭಕ್ಕೆ ಸಿಗುವುದೇ ಹಸಿರು ನಿಶಾನೆ?

ಕಬ್ಬಿನ ದರದ ವಿಚಾರದಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಆರಂಭದ ಬಗ್ಗೆಯೂ ಅನಿಶ್ಚಿತತೆ ಮುಂದುವರಿದಿದೆ. ಅ.26ರ ಸಭೆಯಲ್ಲಿ ದರ ನಿಗದಿ ಕುರಿತು ಒಮ್ಮತ ಮೂಡಿದರೆ ಕಾರ್ಖಾನೆಗಳ ಆರಂಭಕ್ಕೆ ಹಾದಿ ಸುಗಮವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:

ಈ ಮಧ್ಯೆ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಚೂನಪ್ಪ ಪೂಜಾರಿ ಮನವಿ ಮಾಡಿದ್ದಾರೆ. ₹5,500 ದರದ ಬೇಡಿಕೆ ಈಡೇರಿಕೆಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ರೈತರಲ್ಲಿ ಮೂಡಿದೆ. ಸಭೆಯ ತೀರ್ಮಾನವು ಕಬ್ಬು ಬೆಳೆಗಾರರ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.

Must Read